ಹೈದರಾಬಾದ್, ತೆಲಂಗಾಣ:ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆಯ ಬಗ್ಗೆ ಆಪ್ತ ಸಹಾಯಕ ಎಂವಿ ಕೃಷ್ಣಾ ರೆಡ್ಡಿ ಅವರು ಅಂದು ಬೆಳಗ್ಗೆ 6.15ಕ್ಕೆ ಜಗತ್ತಿಗೆ ಬಹಿರಂಗಪಡಿಸುವ ಮುನ್ನವೇ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಹತ್ಯೆಯ ಮಾಹಿತಿ ಸಿಕ್ಕಿತ್ತು ಎಂದು ತೆಲಂಗಾಣ ಹೈಕೋರ್ಟ್ಗೆ ಸಿಬಿಐ ತಿಳಿಸಿದೆ.
ವಿವೇಕ್ ಕೊಲೆ ನಡೆದ ದಿನ ಸಂಸದ ಅವಿನಾಶ್ ರೆಡ್ಡಿ ಅವರು ನಸುಕಿನ ಜಾವ 4.11ಕ್ಕೆ ವಾಟ್ಸ್ಆ್ಯಪ್ನಲ್ಲಿ ಆ್ಯಕ್ಟಿವ್ ಆಗಿದ್ದರು ಎಂಬುದು ಅವರ ಫೋನ್ ಪರಿಶೀಲನೆ ವೇಳೆ ಗೊತ್ತಾಗಿದೆ. ಆದ್ದರಿಂದ ವಿವೇಕ್ ಹತ್ಯೆ ಕುರಿತು ವೈಎಸ್ ಜಗನ್ಗೆ ಮಾಹಿತಿ ನೀಡುವಲ್ಲಿ ಅವಿನಾಶ್ ರೆಡ್ಡಿ ಪಾತ್ರದ ಬಗ್ಗೆ ತನಿಖೆಯಾಗಬೇಕು ಎಂದು ಹೈಕೋರ್ಟ್ಗೆ ಸಿಬಿಐ ವರದಿ ಸಲ್ಲಿಸಿದೆ. ವಿವೇಕ್ ಹತ್ಯೆ ಬಳಿಕ ಮಧ್ಯರಾತ್ರಿ 1.58ಕ್ಕೆ ಅವಿನಾಶ್ ರೆಡ್ಡಿ ಮನೆಗೆ ಎರಡನೇ ಆರೋಪಿ ವೈ.ಸುನೀಲ್ ಯಾದವ್ ಹಾಜರಾಗಿದ್ದು, ಅವಿನಾಶ್ ವಾಟ್ಸಾಪ್ ವಾಯ್ಸ್ ಕಾಲ್ ಹಿನ್ನೆಲೆ ಪೊಲೀಸ್ ಕಸ್ಟಡಿಯಲ್ಲಿರುವ ಸಂಸದರನ್ನು ವಿಚಾರಣೆ ನಡೆಸುವುದು ಅನಿವಾರ್ಯವಾಗಿದೆ ಎಂದು ಸಿಬಿಐ ಹೇಳಿದೆ. ವಿವೇಕ ಹತ್ಯೆ ಪ್ರಕರಣದ ಆರೋಪಿಯಾಗಿರುವ ಸಂಸದ ಅವಿನಾಶ್ ರೆಡ್ಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿರುದ್ಧ ಸಿಬಿಐ ಶುಕ್ರವಾರ ತೆಲಂಗಾಣ ಹೈಕೋರ್ಟ್ನಲ್ಲಿ ಹೆಚ್ಚುವರಿ ಕೌಂಟರ್ ಸಲ್ಲಿಸಿತ್ತು. ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತು. ಕಸ್ಟಡಿ ವಿಚಾರಣೆಗೆ ಸಿಬಿಐ ನೀಡಿರುವ ಕಾರಣಗಳು ಸರಿಯಿಲ್ಲ ಎಂದು ಅವಿನಾಶ್ ಪರ ವಕೀಲರು ಆಕ್ಷೇಪಿಸಿದ್ದಾರೆ.
ಅವಿನಾಶ್ ರೆಡ್ಡಿ ಅವರಿಗೆ ನಿರೀಕ್ಷಣಾ ಜಾಮೀನನ್ನು ನೀಡಬಾರದೆಂದು ಮತ್ತು ತನಿಖೆಯನ್ನು ಚುರುಕುಗೊಳಿಸಲು ಕಸ್ಟಡಿಯಲ್ಲಿ ವಿಚಾರಣೆ ನಡೆಸಬೇಕಾಗಿದೆ ಎಂದು ಕೋರ್ಟ್ಗೆ ಸಿಬಿಐ ಹೇಳಿದೆ. ಈ ಹಿಂದೆ ತನಿಖೆ ವೇಳೆ ನುಣುಚಿಕೊಳ್ಳುವ ಉತ್ತರ ನೀಡಿ ತನಿಖೆಗೆ ಸಹಕರಿಸುತ್ತಿರಲಿಲ್ಲ. ಆದ್ದರಿಂದ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಅಗತ್ಯ ಎಂದು ಈ ಹಿಂದೆಯೇ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು ಎಂದು ಕೋರ್ಟ್ ಗಮನಕ್ಕೆ ಸಿಬಿಐ ತಂದಿದೆ.
ಐಪಿಡಿಆರ್ ಮೂಲಕ ಅವಿನಾಶ್ ರೆಡ್ಡಿ ಮೊಬೈಲ್ ಪರಿಶೀಲನೆ ನಡೆಸಿದಾಗ, ವಿವೇಕಾನಂದ ರೆಡ್ಡಿ ಹತ್ಯೆಗೂ ಮುನ್ನ 2019ರ ಮಾರ್ಚ್ 15ರ ಮಧ್ಯರಾತ್ರಿ 12.27ರಿಂದ 1.10ರವರೆಗೆ ವಾಟ್ಸಾಪ್ನಲ್ಲಿ ಆ್ಯಕ್ಟಿವ್ ಆಗಿ ವಾಟ್ಸಾಪ್ ಕರೆಗಳನ್ನೂ ಮಾಡಿದ್ದರು ಎನ್ನಲಾಗಿದೆ. ವಿವೇಕಾನಂದ ರೆಡ್ಡಿ ಹತ್ಯೆಯಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳು ಅಂದು ರಾತ್ರಿ 1.30ರ ಸುಮಾರಿಗೆ ವಿವೇಕ ಅವರ ಮನೆಗೆ ನುಗ್ಗಿದ್ದರು ಎನ್ನಲಾಗಿದೆ. ಮೇಲಾಗಿ, ವಿವೇಕಾ ಹತ್ಯೆಯ ನಂತರ, ಎರಡನೇ ಆರೋಪಿ ವೈ.ಸುನೀಲ್ ಯಾದವ್, ಅಂದು ರಾತ್ರಿ 1.58ಕ್ಕೆ ವೈ.ಎಸ್.ಅವಿನಾಶ್ ರೆಡ್ಡಿ/ಭಾಸ್ಕರ ರೆಡ್ಡಿ ಅವರ ಮನೆಯಲ್ಲಿದ್ದರು ಎಂದು ಮೊಬೈಲ್ ಫೋನ್ ಲೊಕೇಶನ್ನಿಂದ ಗೊತ್ತಾಗಿದೆ. ಮಾರ್ಚ್ 15ರ ಬೆಳಗ್ಗೆ 4.11ಕ್ಕೆ ಅವಿನಾಶ್ ರೆಡ್ಡಿ ವಾಟ್ಸಾಪ್ ಸಂಭಾಷಣೆ ನಡೆಸಿರುವುದು ಐಪಿಡಿಆರ್ ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ವಿವರಿಸಿದೆ.
ತನಿಖೆಗೆ ಸಹಕರಿಸದ ಸಂಸದ:ಸಿಆರ್ಪಿಸಿ ಸೆಕ್ಷನ್ 160ರ ಅಡಿಯಲ್ಲಿ ಅವಿನಾಶ್ ರೆಡ್ಡಿ ಅವರಿಗೆ ಈ ತಿಂಗಳ 16ರಂದು ಬೆಳಗ್ಗೆ 11 ಗಂಟೆಗೆ ತನಿಖೆಗೆ ಹಾಜರಾಗುವಂತೆ ಮೇ 15ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ, ಪೂರ್ವ ನಿಯೋಜಿತ ಕಾರ್ಯಕ್ರಮಗಳಿ ಕಾರಣದಿಂದ ಹಾಜರಾಗಿರಲಿಲ್ಲ. ಇದರಿಂದ 19ರಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗಿಲ್ಲ. ತಾಯಿಯ ಆರೋಗ್ಯ ಸರಿಯಿಲ್ಲ, ತಾಯಿಯ ಆರೋಗ್ಯದಲ್ಲಿ ಚೇತರಿಕೆ ಬಳಿಕ ತನಿಖೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೂ ಆಗಿರಲಿಲ್ಲ. ಬಳಿಕ 22ರಂದು ಸಿಬಿಐ ಮುಂದೆ ಹಾಜರಾಗುವಂತೆ 19ರಂದು ಮತ್ತೊಂದು ನೋಟಿಸ್ ನೀಡಲು ಹೈದರಾಬಾದ್ನಲ್ಲಿರುವ ಅವರ ನಿವಾಸಕ್ಕೆ ಹೋದಾಗ ಅವರ ಮನೆ ಬೀಗ ಹಾಕಿತ್ತು. ಪುಲಿವೆಂದುದಲ್ಲಿ ಅವರು ಲಭ್ಯವಿಲ್ಲದ ಕಾರಣ ಅಲ್ಲಿದ್ದ ಆಪ್ತ ಸಹಾಯಕನಿಗೆ ನೋಟಿಸ್ ನೀಡಿದ್ದೇವೆ ಎಂದು ಸಿಬಿಐ ಹೈಕೋರ್ಟ್ಗೆ ಮಾಹಿತಿ ಸಲ್ಲಿಸಿದೆ. ಇದಲ್ಲದೆ, ಇಮೇಲ್ ಮತ್ತು ವಾಟ್ಸಾಪ್ ಮೂಲಕವೂ ನೋಟಿಸ್ ಕಳುಹಿಸಲಾಗಿದೆ. ಸಿಬಿಐ ಪ್ರಕಾರ, ಈ ನೋಟಿಸ್ ಹಿನ್ನೆಲೆಯಲ್ಲಿ ಕರ್ನೂಲ್ನ ವಿಶ್ವಭಾರತಿ ಆಸ್ಪತ್ರೆಯಲ್ಲಿರುವ ತನ್ನ ತಾಯಿಯನ್ನು ನೋಡಿಕೊಳ್ಳಬೇಕಾಗಿತ್ತು ಮತ್ತು ಆದ್ದರಿಂದ ಹಾಜರಾತಿಯನ್ನು 7 ದಿನಗಳವರೆಗೆ ಮುಂದೂಡಬೇಕು ಎಂದು ಅವರು ತಿಳಿಸಿದ್ದರು.