ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಅಂಶ ಹೊರಬಿದ್ದಿದೆ. ಈ ಹಗರಣದ ಹಣವನ್ನು ಆರೋಪಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ವಿದೇಶಿ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಮೂಲಗಳು ತಿಳಿಸಿವೆ.
ಶಾಲಾ ಸೇವಾ ಆಯೋಗ (ಎಸ್‌ಎಸ್‌ಸಿ) ನಡೆಸಿದ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಆರೋಪ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವೂ ಕೇಳಿ ಬಂದಿದ್ದು, ಈ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಪ್ರತ್ಯೇಕ ತನಿಖೆ ಕೈಗೊಂಡಿದೆ. ಇದೀಗ ವಿದೇಶಿ ಕಂಪನಿಗಳಲ್ಲಿ ಆರೋಪಿಗಳು ಹಣ ಹೂಡಿಕೆ ಮಾಡಿದ್ದಾರೆ. ಇಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲಿ ಹಗರಣದ ಹಣವನ್ನು ಆರೋಪಿಗಳು ಲಪಟಾಯಿಸಿದ್ದಾರೆ ಎಂದು ತನಿಖಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಸುಬಿರೇಶ್ ಭಟ್ಟಾಚಾರ್ಯ ನಿಕಟ ಸಂಬಂಧಿ ಹೆಸರು ತಳುಕು: ಆದರೆ, ಇಂತಹ ಆರೋಪಿಗಳ ಹೆಸರನ್ನು ಬಹಿರಂಗಪಡಿಸಲು ಸಿಬಿಐ ಅಧಿಕಾರಿಗಳು ನಿರಾಕರಿಸಿದ್ದಾರೆ. ಇದೇ ವೇಳೆ ಸಿಬಿಐ ಮೂಲಗಳ ಪ್ರಕಾರ, ಎಸ್‌ಎಸ್‌ಸಿ ಮಾಜಿ ಅಧ್ಯಕ್ಷ ಸುಬಿರೇಶ್ ಭಟ್ಟಾಚಾರ್ಯ ಅವರ ನಿಕಟ ಸಂಬಂಧಿಯ ಹೆಸರು ತನಿಖೆಯ ಸಮಯದಲ್ಲಿ ಕೇಳಿ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಭಟ್ಟಾಚಾರ್ಯ, ಉತ್ತರ ಬಂಗಾಳ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಶೀಘ್ರದಲ್ಲೇ ಕೋಲ್ಕತ್ತಾದ ನಿಜಾಮ್ ಪ್ಯಾಲೇಸ್‌ನಲ್ಲಿರುವ ಸಿಬಿಐ ಕಚೇರಿಯಲ್ಲಿ ಸುಬಿರೇಶ್ ಭಟ್ಟಾಚಾರ್ಯ ಅವರ ಹತ್ತಿರದ ಸಂಬಂಧಿಯನ್ನು ವಿಚಾರಣೆಗೆ ಕರೆಸಲಾಗುವುದು. ಇದಾದ ನಂತರವೇ ಮಾತ್ರ ಆ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಲಾಗುವುದು. ಭಟ್ಟಾಚಾರ್ಯ ನಿಕಟ ಸಂಬಂಧಿಯ ವಿಚಾರಣೆಯಿಂದ ಮಹತ್ವದ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.