ಕರ್ನಾಟಕ

karnataka

ETV Bharat / bharat

ದೇಶದ ವಿರುದ್ಧ ಬೇಹುಗಾರಿಕೆ ಆರೋಪ: ಫ್ರೀಲಾನ್ಸ್​ ಪತ್ರಕರ್ತನ ವಿರುದ್ಧ ಸಿಬಿಐ ಕೇಸ್​ - ದೇಶದ ಸೂಕ್ಷ್ಮ ಮಾಹಿತಿ ಹಂಚಿಕೊಂಡ ಪತ್ರಕರ್ತ

ದೇಶದ ಕೆಲ ಸೂಕ್ಷ್ಮ ಸಂಗತಿಗಳನ್ನು ಹೊರದೇಶಗಳೊಂದಿಗೆ ಹಂಚಿಕೆ ಮಾಡಿಕೊಳ್ಳುತ್ತಿದ್ದ ಫ್ರೀಲಾನ್ಸ್​ ಪತ್ರಕರ್ತನ ವಿರುದ್ಧ ಸಿಬಿಐ ಕೇಸ್​ ಜಡಿದಿದೆ.

ದೇಶದ ವಿರುದ್ಧ ಬೇಹುಗಾರಿಕೆ ಆರೋಪ
ದೇಶದ ವಿರುದ್ಧ ಬೇಹುಗಾರಿಕೆ ಆರೋಪ

By

Published : May 16, 2023, 7:49 PM IST

ನವದೆಹಲಿ:ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ವಿದೇಶಗಳ ಗುಪ್ತಚರ ಸಂಸ್ಥೆಗಳಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ಆರೋಪದ ಮೇಲೆ ಫ್ರೀಲಾನ್ಸ್​ ಪತ್ರಕರ್ತನ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.

ವಿವೇಕ್ ರಘುವಂಶಿ ಆರೋಪಿ ಪತ್ರಕರ್ತ. ಜೈಪುರ ಮತ್ತು ದೆಹಲಿಯಲ್ಲಿ ತನ್ನ ಜಾಲವನ್ನು ಹೊಂದಿರುವ ವಿವೇಕ್​ ಹೊರದೇಶಗಳೊಂದಿಗೆ ದೇಶದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪವಿದೆ. ಹೀಗಾಗಿ ಪತ್ರಕರ್ತನ ವಿರುದ್ಧ ಅಧಿಕಾರಿಗಳ ರಹಸ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಎಫ್‌ಐಆರ್ ದಾಖಲಿಸಿದ ಬಳಿಕ, ಜೈಪುರ ಮತ್ತು ದೆಹಲಿಯ 12 ಸ್ಥಳಗಳಲ್ಲಿ ಪತ್ರಕರ್ತ ವಿವೇಕ್ ರಘುವಂಶಿ ಮತ್ತು ಆತನಿಗೆ ನಿಕಟವಾಗಿರುವ ವ್ಯಕ್ತಿಗಳನ್ನು ಪತ್ತೆ ಮಾಡಲು ಸಿಬಿಐ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹಲವಾರು ಸೂಕ್ಷ್ಮ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಳಿಕ ಅವುಗಳನ್ನು ಕಾನೂನು ಪರಿಶೀಲನೆಗೆ ಕಳುಹಿಸಲಾಗಿದೆ. ಭಾರತವಲ್ಲದೇ, ವಿದೇಶಗಳಲ್ಲಿ ರಘುವಂಶಿಯ ಸಹಚರರ ಜಾಡನ್ನೂ ಪತ್ತೆ ಮಾಡಲು ಸಿಬಿಐ ಸಮಗ್ರ ತನಿಖೆಗೆ ಮುಂದಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ರಘುವಂಶಿ, ಡಿಆರ್‌ಡಿಒ ಮತ್ತು ಸೇನಾ ಯೋಜನೆಗಳ ಸೂಕ್ಷ್ಮ ಮತ್ತು ಮಿನಿಟ್ಸ್ ವಿವರಗಳನ್ನು ಸಂಗ್ರಹಿಸಿ ಅವುಗಳನ್ನು ವಿದೇಶಗಳ ಗುಪ್ತಚರ ಸಂಸ್ಥೆಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಭಾರತೀಯ ಸಶಸ್ತ್ರ ಪಡೆಗಳ ಭವಿಷ್ಯದ ಖರೀದಿ ಯೋಜನೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದರು. ಇದು ದೇಶದ ಕಾರ್ಯತಂತ್ರದ ಸನ್ನದ್ಧತೆಗೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸಂಸ್ಥೆ ಆರೋಪಿಸಿದೆ.

ಇದಲ್ಲದೇ, ರಘುವಂಶಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ರಹಸ್ಯ ಸಂವಹನ ಮಾಹಿತಿ, ಸ್ನೇಹಪರ ದೇಶಗಳೊಂದಿಗೆ ಭಾರತದ ವ್ಯೂಹಾತ್ಮಕ ಮತ್ತು ರಾಜತಾಂತ್ರಿಕ ಮಾತುಕತೆಗಳ ವಿವರಗಳನ್ನು ಸಂಗ್ರಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಈ ಮಾಹಿತಿ ಬಹಿರಂಗವಾದರೆ ದೇಶಗಳೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧವನ್ನು ಅದು ಹಾಳುಮಾಡಬಹುದು ಎಂದು ಸಿಬಿಐ ಹೇಳಿದೆ.

ದೇಶದ್ರೋಹಿ ಜವಳಿ ವ್ಯಾಪಾರಿ:ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್​ಐ ಜೊತೆಗೆ ನಂಟು ಹೊಂದಿದ್ದ ಗುಜರಾತ್​ನ ಸೂರತ್​​ನಲ್ಲಿ ಜವಳಿ ಅಂಗಡಿ ನಡೆಸುತ್ತಿದ್ದ ವ್ಯಾಪಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದರು. ದೇಶದ್ರೋಹಿಯನ್ನು ದೀಪಕ್ ಸಾಳುಂಕೆ ಎಂದು ಗುರುತಿಸಲಾಗಿದೆ.

ಸೂರತ್‌ನ ಭುವನೇಶ್ವರಿ ನಗರದ ಯೋಗೇಶ್ವರ ಪಾರ್ಕ್ ಸೊಸೈಟಿಯ ನಿವಾಸಿಯಾದ ಈ ವ್ಯಾಪಾರಿ, ಭಾರತೀಯ ಸೇನೆಯ ಮಾಹಿತಿಯನ್ನು ಐಎಸ್​ಐ ಏಜೆಂಟ್ ಹಮೀದ್ ಜೊತೆ ಹಂಚಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿತ್ತು.

ಆರೋಪಿ ದೀಪಕ್​ ಐಎಸ್​ಐ ಏಜೆಂಟ್​ ಹಮೀದ್​ನಿಂದ 75 ಸಾವಿರ ರೂಪಾಯಿ ಪಡೆದುಕೊಂಡಿದ್ದರು. ಈ ಹಣದಲ್ಲಿ ಸಾಯಿ ಫ್ಯಾಷನ್ ಎಂಬ ಜವಳಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಿಂದಲೇ ಬೇಹುಗಾರಿಕೆ ಚಟುವಟಿಕೆ ನಡೆಸಿ, ದೇಶದ ಆಂತರಿಕ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್​ಗಳಾದ ಹಮೀದ್ ಮತ್ತು ಕಾಶಿಫ್ ಜೊತೆಗೆ ಹಂಚಿಕೊಳ್ಳುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಬಂಧಿತ ದೀಪಕ್​, ಸಾಳುಂಕೆ ಎಂಬ ಹೆಸರಿನಲ್ಲಿ ನಕಲಿ ಫೇಸ್​ಬುಕ್​ ಖಾತೆ ಹೊಂದಿದ್ದ. ಇದರ ಮೂಲಕವೇ ಪಾಕಿಸ್ತಾನಿ ಏಜೆಂಟ್​ ಹಮೀದ್​ ಜೊತೆಗೆ ಸಂಪರ್ಕ ಸಾಧಿಸಿದ್ದ. ಬಳಿಕ ಭಾರತದ ರಹಸ್ಯ ಮತ್ತು ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುವುದಾಗಿ ತಿಳಿಸಿದ್ದ. ಜೂನ್​ನಿಂದ ಈ ಕಳ್ಳ ವ್ಯವಹಾರ ನಡೆಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಂಚಕ ದೀಪಕ್​ ವಿರುದ್ಧ ದೇಶದ್ರೋಹದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಓದಿ:ಪೆಗಾಸಸ್‌ ಮೂಲಕ ನನ್ನ ಫೋನ್‌ ಮೇಲೆ ಗೂಢಚಾರಿಕೆ; ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ: ರಾಹುಲ್ ಗಾಂಧಿ

ABOUT THE AUTHOR

...view details