ಮುರ್ಷಿದಾಬಾದ್ (ಪಶ್ಚಿಮ ಬಂಗಾಳ):ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಟಿಎಂಸಿ ಶಾಸಕ ಜಿಬಾನ್ ಕೃಷ್ಣ ಸಹಾ ಅವರನ್ನು ಬಂಧಿಸಿದೆ. ಸಹಾ ಅವರು ಪಶ್ಚಿಮ ಬಂಗಾಳದ ಬುರ್ವಾನ್ ಕ್ಷೇತ್ರದ ಶಾಸಕರಾಗಿದ್ದಾರೆ. ಮುರ್ಷಿದಾಬಾದ್ ಜಿಲ್ಲೆಯ ಬುರ್ವಾನ್‌ನಲ್ಲಿರುವ ಅವರ ನಿವಾಸದಿಂದ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ. ಕಲ್ಕತ್ತಾ ಹೈಕೋರ್ಟ್‌ನ ಆದೇಶದ ಮೇರೆಗೆ ಶಾಸಕ ಸಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳದ ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿ ಪ್ರಕ್ರಿಯೆ ನಡೆದಿರುವ ಕುರಿತು ಸಿಬಿಐ ಅಧಿಕಾರಿಗಳ ವಿಶೇಷ ತಂಡ ಏಪ್ರಿಲ್ 14 ರಿಂದ ಶಾಸಕ ಸಹಾ ಅವರ ನಿವಾಸ ಸೇರಿದಂತೆ ಆರು ಸ್ಥಳಗಳಲ್ಲಿ ಶೋಧ ನಡೆಸಿತ್ತು. ಬಿರ್ಭೂಮ್, ಮುರ್ಷಿದಾಬಾದ್ ಮತ್ತು ಕೋಲ್ಕತ್ತಾದಲ್ಲಿ ಸಹಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ತಂಡಗಳು ಶೋಧ ನಡೆಸಿವೆ. ಭಾನುವಾರ ಸಂಜೆ ಅವರ ಮನೆಯ ಎದುರಿನ ನೀರಿನ ಹೊಂಡದಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದ್ದು, ಹೊಂಡದಿಂದ ಫೋನ್ ಅನ್ನು ಹೊರ ತೆಗೆದು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.