ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಡಿಸೆಂಬರ್ ಅಂತ್ಯದವರೆಗೆ ನಿತ್ಯ 3,128 ಕ್ಯೂಸೆಕ್ ಹಾಗೂ ಮುಂದಿನ ವರ್ಷ ಜನವರಿ ತಿಂಗಳ ಕೊನೆಯವರೆಗೆ 1030 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWR) ಸರ್ಕಾರಕ್ಕೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಮಂಗಳವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ, ಡಿಸೆಂಬರ್ 20 ರಿಂದ 43 ದಿನಗಳವರೆ ಸುಪ್ರೀಂ ಕೋರ್ಟ್ ಮಾರ್ಪಡಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ಆದೇಶದ ಪ್ರಕಾರ ನಿಗದಿತ ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ಸಮಿತಿ ಸೂಚಿಸಿದೆ. ಇದರ ಪ್ರಕಾರ ಡಿಸೆಂಬರ ಉಳಿದ ಅವಧಿಗೆ ದಿನಕ್ಕೆ 3,128 ಕ್ಯೂಸೆಕ್ ಮತ್ತು 2024ರ ಜನವರಿ ಅಂತ್ಯಕ್ಕೆ ದಿನಕ್ಕೆ 1,030 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸಬೇಕಿದೆ. ಒಟ್ಟಾರೆ ಕರ್ನಾಟಕವು ಡಿಸೆಂಬರ್ 20 ರಿಂದ 31ರ ವರೆಗೆ 3.51 ಟಿಎಂಸಿ ಮತ್ತು ಜನವರಿ1 ರಿಂದ 31ರವರೆಗೆ 2.76 ಟಿಎಂಸಿ ನೀರು ಹರಿಸಬೇಕಾಗಿದೆ.
ನೀರು ಹರಿಸುವ ಸ್ಥಿತಿಯಲ್ಲಿ ಇಲ್ಲ ಎಂದ ಕರ್ನಾಟಕ: ಸಭೆಯಲ್ಲಿ, ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕ ವಾದಿಸಿತ್ತು. ಅಲ್ಲದೇ ರಾಜ್ಯದ ನಾಲ್ಕು ಕಾವೇರಿ ಜಲಾನಯನ ಜಲಾಶಯಗಳು ಒಳಹರಿವಿನಲ್ಲಿ 52.82% ಕೊರತೆಯನ್ನು ಎದುರಿಸುತ್ತಿವೆ ಎಂದೂ ತಿಳಿಸಿತು. ತಮಿಳುನಾಡಿನಲ್ಲಿ ಈ ಸಮಯದಲ್ಲಿ ಮಳೆ ನಿರೀಕ್ಷಿಸಬಹುದಾಗಿದೆ. ಅಲ್ಲದೆ ಅಲ್ಲಿ ಸಾಕಷ್ಟು ಮಣ್ಣಿನ ತೇವಾಂಶವಿದ್ದು, ಯಾವುದೇ ಬೆಳೆಗಳು ಉಳಿಸಿಕೊಳ್ಳಬಹುದಾಗಿದೆ. ತಮಿಳುನಾಡಿನ ಬೆಳೆಗಳು ಸೆಪ್ಟೆಂಬರ್ ಅಂತ್ಯಕ್ಕೆ ಕೊಯ್ಲಿಗೆ ಬಂದಿದ್ದು, ಡಿಸೆಂಬರ್ ಮೊದಲ ವಾರದ ಅಂತ್ಯಕ್ಕೆ ಸಾಂಬಾ ಬೆಳೆ ಕಟಾವಿಗೆ ಬಂದಿದೆ. ಹೀಗಾಗಿ ಈ ಬೆಳೆಗಳಿಗೆ ನೀರಿನ ಅವಶ್ಯಕತೆ ಇಲ್ಲ.