ಮುಂಬೈ:ಮಹಾರಾಷ್ಟ್ರದ ನಾಸಿಕ್‌ನ ಡಾ. ಝಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಾದ ಪರಿಣಾಮ 24 ಕೊರೊನಾ ರೋಗಿಗಳು ಮೃತಪಟ್ಟಿದ್ದು, ಇದೀಗ ದುರಂತ ಸಂಭವಿಸಿದ ನಿರ್ದಿಷ್ಟ ಸ್ಥಳವನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿ ಬೆಳಕಿಗೆ ಬಂದಿವೆ.
ಕೋವಿಡ್ ರೋಗಿಗಳಿಗಾಗಿಯೇ ಮೀಸಲಾಗಿದ್ದ ಆಸ್ಪತ್ರೆಯಲ್ಲಿ ದುರಂತ ಸಂಭವಿಸಿದ ಸಮಯದಲ್ಲಿ ಸುಮಾರು 150 ರೋಗಿಗಳು ಆಮ್ಲಜನಕವನ್ನು ಅವಲಂಬಿಸಿದ್ದರು ಎಂಬ ಮಾಹಿತಿ ಹೊರ ಬಿದ್ದಿದೆ.
ಡಾ. ಝಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ಸಂಭವಿಸಿದ ಆಮ್ಲಜನಕ ಸೋರಿಕೆ ದುರಂತದ ಕ್ಷಣ ಸೆರೆಯಾಗಿದೆ ಸಿಸಿಟಿವಿಯಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿದ್ದು, ದುರಂತ ನಡೆದ ಸಂದರ್ಭದಲ್ಲಿ ಆಸ್ಪತ್ರೆಯ ಆವರದಲ್ಲಿ ಬಿಳಿ ಹೊಗೆ ಕಂಡುಬಂದಿದೆ. ಇದು ದುರ್ಘಟನೆಯ ನಿಖರ ಸ್ಥಳ ಹಾಗೂ ಸಮಯವನ್ನು ಸ್ಪಷ್ಟಪಡಿಸಿದೆ.
ಸಿಸಿಟಿವಿಯಲ್ಲಿ ಕಂಡು ಬಂದಿರುವ ದೃಶ್ಯಾವಳಿಯಲ್ಲಿ ಟ್ಯಾಂಕರ್ ಪಕ್ಕದಲ್ಲಿ ಇಬ್ಬರು ಪುರುಷರು ನಿಂತಿದ್ದು, ಅವರು ಪೈಪ್ ಮೂಲಕ ಆಸ್ಪತ್ರೆಯ ಶೇಖರಣಾ ಟ್ಯಾಂಕ್ಗೆ ಆಮ್ಲಜನಕವನ್ನು ವರ್ಗಾಯಿಸಿದ್ದಾರೆ. ಇದ್ದಕ್ಕಿದ್ದಂತೆ, ಟ್ಯಾಂಕ್ನಲ್ಲಿ ಸೋರಿಕೆ ಪ್ರಾರಂಭವಾಗಿದ್ದು, ಸುತ್ತಮುತ್ತ ನಿಂತ ಜನರು ಸುರಕ್ಷತೆಗಾಗಿ ಓಡಿದ್ದಾರೆ.
ಘಟನೆಯ ತನಿಖೆಗಾಗಿ ನಾಸಿಕ್ ವಿಭಾಗೀಯ ಆಯುಕ್ತ ರಾಧಾಕೃಷ್ಣ ಗೇಮ್ ನೇತೃತ್ವದ ಏಳು ಸದಸ್ಯರನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಈಗಾಗಲೇ ಸ್ಥಳೀಯ ಪೊಲೀಸರು ಕೂಡ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್ 304–ಎ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.
ಈಗಾಗಲೇ ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆಯು ಏರುಗತಿಯಲ್ಲಿ ಸಾಗುತ್ತಿದ್ದು, ವೈರಸ್ ನಿಯಂತ್ರಣಕ್ಕೆ ತರುವಲ್ಲಿ ಅಲ್ಲಿನ ಸರ್ಕಾರ ಪೇಚಾಡುತ್ತಿರುವ ಇಂತಹ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ.
ಓದಿ:ದಾಂಪತ್ಯ ಜೀವನಕ್ಕೆ ಕಾಲಿಡಬೇಕಾಗಿದ್ದ ಹಿಂದಿನ ದಿನವೇ ಕೋವಿಡ್ನಿಂದ ನರ್ಸ್ ಸಾವು!