ಬದೌನ್:ಕೆಲವೊಂದು ಘಟನೆಗಳು ಮನಸ್ಸನ್ನು ಕಲಕಿ ಬಿಡುತ್ತವೆ. ಕಣ್ಣೆದುರಿಗಿದ್ದ ವ್ಯಕ್ತಿ ಮುಂದಿನ ಕ್ಷಣದಲ್ಲಿ ಇರುವುದಿಲ್ಲ. ಇಂಥದ್ದೇ ಒಂದು ಘಟನೆ ಉತ್ತರಪ್ರದೇಶದ ಬದೌನ್ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಏನೂ ಅರಿಯದ ಪುಟ್ಟ ಕಂದಮ್ಮನನ್ನು ಬೆಕ್ಕೊಂದು ಎತ್ತಿಕೊಂಡು ಹೋಗಿ ಮನೆಯ ಮಹಡಿಯಿಂದ ಬಿಸಾಡಿದೆ. ಬಿದ್ದು ತೀವ್ರ ಗಾಯಗೊಂಡ ಹಸುಳೆ ಪ್ರಾಣ ಬಿಟ್ಟಿದೆ.
ಬದೌನ್ ಜಿಲ್ಲೆಯ ಉಸಾವನ್ ಪೊಲೀಸ್ ಠಾಣಾ ವ್ಯಾಪ್ತಿಯ ಗೌಂತರ ಪಟ್ಟಿ ಭೌನಿ ಎಂಬ ಗ್ರಾಮದಲ್ಲಿ ಈ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ತಾಯಿಯೊಂದಿಗೆ ಮಲಗಿದ್ದ ಹೆಣ್ಣು ಮಗುವನ್ನು ಬೆಕ್ಕು ಬಾಯಿಯಲ್ಲಿ ಕಚ್ಚಿಕೊಂಡು ಹೋಗಿದೆ. ಮಹಡಿ ಮೇಲೆ ಮಗು ಅಳುವುದನ್ನು ಕೇಳಿಸಿಕೊಂಡು ಮನೆಯವರು ಗಲಾಟೆ ಮಾಡಿದ್ದು, ಈ ವೇಳೆ, ಬೆಕ್ಕು ಮಗುವನ್ನು ಬಿಟ್ಟು ಓಡಿ ಹೋಗಿದೆ. ಆಗ ಕಂದಮ್ಮ ಮಾಳಿಗೆಯಿಂದ ಅಂಗಳಕ್ಕೆ ಬಿದ್ದು ಸಾವನ್ನಪ್ಪಿದೆ. ಅಚಾನಕ್ಕಾಗಿ ನಡೆದ ಘಟನೆ ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸೋಮವಾರ ಬೆಳಗ್ಗೆ ಮಗುವಿನ ಶವವನ್ನು ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದರು.
ಘಟನೆ ಹೇಗಾಯ್ತು?:ಗ್ರಾಮದ ರೇಷ್ಮಾ ಎಂಬುವವರು 15 ದಿನಗಳ ಹಿಂದೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದರಲ್ಲಿ ಒಂದು ಗಂಡು, ಹೆಣ್ಣಾಗಿತ್ತು. ಭಾನುವಾರ ರಾತ್ರಿ ಮನೆಯಲ್ಲಿ ಮಕ್ಕಳಿಬ್ಬರನ್ನು ಮಲಗಿಸಲಾಗಿತ್ತು. ಈ ವೇಳೆ, ಅಲ್ಲಿಗೆ ಇಲಿಯನ್ನು ಹುಡುಕಿಕೊಂಡು ಬಂದ ಬೆಕ್ಕು ಹೆಣ್ಣು ಮಗುವನ್ನು ಕಚ್ಚಿಕೊಂಡು ಹೋಗಿದೆ. ಈ ಸಮಯಕ್ಕೆ ತಾಯಿ ಅಲ್ಲಿರಲಿಲ್ಲ. ಹಸುಳೆಯನ್ನು ಬೆಕ್ಕು ಮಹಡಿಯ ಮೇಲೆ ಎತ್ತಿಕೊಂಡು ಹೋಗಿದೆ.