ಹೈದರಾಬಾದ್: ವಿದೇಶಿ ಕ್ಯಾಸಿನೋ ಪ್ರಕರಣದಲ್ಲಿ ಏಜೆಂಟ್ ಚಿಕೋಟಿ ಪ್ರವೀಣ್ ಮತ್ತು ದಾಸರಿ ಮಾಧವ್ ರೆಡ್ಡಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಸತತ ಎರಡನೇ ದಿನವೂ ವಿಚಾರಣೆ ನಡೆಸಿದೆ. ಮೊದಲ ದಿನ, ಇಬ್ಬರೂ ಸುಮಾರು 11 ಗಂಟೆಗಳ ಕಾಲ ಇಡಿ ಕಚೇರಿಯಲ್ಲಿ ಕಳೆದಿದ್ದರು. ಮಂಗಳವಾರ ಬೆಳಗ್ಗೆ ಮತ್ತೆ ವಿಚಾರಣೆಗೆ ಹಾಜರಾಗಿದ್ದರು. ಸುಮಾರು 10 ಗಂಟೆಗಳ ವಿಚಾರಣೆ ಬಳಿಕ ಮಾಧವ ರೆಡ್ಡಿ ಅಲ್ಲಿಂದ ತೆರಳಿದ್ದು, ಪ್ರವೀಣ್ ವಿಚಾರಣೆ ಮುಂದುವರಿದಿದೆ.
ಎರಡನೇ ದಿನ ಇಡಿ ಅಧಿಕಾರಿಗಳು ಮುಖ್ಯವಾಗಿ ಹವಾಲಾ ವಹಿವಾಟಿನ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಕ್ಯಾಸಿನೊಗಳಲ್ಲಿ ಪಂಟರ್‌ಗಳಿಗೆ ನೀಡುವ ಟೋಕನ್‌ಗಳಿಗೆ ಸಂಬಂಧಿಸಿದ ಹಣದ ವಿನಿಮಯ ಹೇಗೆ ನಡೆಯುತ್ತದೆ ಎಂಬ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಐಷಾರಾಮಿ ಜೀವನಕ್ಕೆ ಹಣ ಎಲ್ಲಿಂದ ಬರ್ತಿದೆ?..ತೆಲುಗು ರಾಜ್ಯಗಳ ಪಂಟರ್‌ಗಳು ಕ್ಯಾಸಿನೊಗಳಲ್ಲಿ ಕೋಟ್ಯಂತರ ರೂಪಾಯಿ ಜೂಜಾಟ ನಡೆಸಿದ್ದಾರೆ ಎಂದು ಇಡಿ ಶಂಕಿಸಿದೆ. ಹೆಸರಾಂತ ಜನಪ್ರತಿನಿಧಿಗಳು ಮತ್ತು ಶ್ರೀಮಂತ ಉದ್ಯಮಿಗಳು ಪಂಟರ್‌ಗಳ ಪಟ್ಟಿಯಲ್ಲಿರುವ ಬಗ್ಗೆ ಪ್ರಾಥಮಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಈ ವ್ಯವಹಾರಗಳ ತನಿಖೆಯ ಭಾಗವಾಗಿ, ಇಡಿ ತಂಡಗಳು ಪ್ರವೀಣ್ ಮತ್ತು ಮಾಧವ ರೆಡ್ಡಿ ಅವರ ಬ್ಯಾಂಕ್ ಖಾತೆಗಳ ಬಗ್ಗೆ ವಿಚಾರಣೆ ನಡೆಸಿವೆ. ಪಂಟರ್‌ಗಳ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ವಿಮಾನಗಳ ವೆಚ್ಚದ ಬಗ್ಗೆಯೂ ವಿಚಾರಣೆ ನಡೆದಿದೆ. ಈ ವಿಷಯಗಳ ಬಗ್ಗೆ ಮಾಹಿತಿ ನೀಡಲು ಇಬ್ಬರೂ ಹಿಂಜರಿಯುತ್ತಿದ್ದಾರೆ ಎಂದು ವರದಿಯಾಗಿದೆ. ಕ್ಯಾಸಿನೋ ಪ್ರಚಾರಕ್ಕಾಗಿ ಸಿನಿಮಾ ತಾರೆಯರಿಗೆ ಹಣ ನೀಡಿದ ಬಗ್ಗೆ ಕೇಳಿದಾಗ ಪ್ರವೀಣ್ ಅಸಮಂಜಸ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಈಗಿನ ಸಂದರ್ಭದಲ್ಲಿ ಪ್ರವೀಣ್ ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆಗಳಿವೆ. ತಮ್ಮ ವೈಭವೋಪೇತ ಜೀವನದ ಚಿತ್ರಗಳನ್ನು ಇವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದರು ಎಂಬುದು ಗಮನಾರ್ಹ.