ನವದೆಹಲಿ/ಕೋಲ್ಕತ್ತಾ:ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಾಥಮಿಕ ತನಿಖೆ ಆರಂಭಿಸಿದೆ. ಈ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಲೋಕಪಾಲ್ ಸಂಸ್ಥೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಲೋಕಪಾಲ್ದ ಶಿಫಾರಸಿನ ಮೇರೆಗೆ ಟಿಎಂಸಿ ಸಂಸದೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಲಾಗಿದೆ ಎಂದು ಸಿಬಿಐ ಮೂಲಗಳು ಶನಿವಾರ ತಿಳಿಸಿವೆ. ಆದರೆ, ಈ ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸಂಸದೆ ಮೊಯಿತ್ರಾ ನಿರಾಕರಿಸಿದ್ದಾರೆ. ಇದು ಕೆಲ ಮಾಧ್ಯಮಗಳ ಸೃಷ್ಟಿ ಎಂದು ಕಿಡಿಕಾರಿದ್ದಾರೆ.
ಸಿಬಿಐ ತನಿಖೆ ನಡೆಸುತ್ತಿಲ್ಲ:ತಮ್ಮ ವಿರುದ್ಧದ ಪ್ರಕರಣವನ್ನು ಲೋಕಪಾಲ್ ಅಥವಾ ಸಿಬಿಐ ತನಿಖೆ ನಡೆಸುತ್ತಿಲ್ಲ ಎಂದು ಮಹುವಾ ಮೊಯಿತ್ರಾ ಹೇಳಿದ್ದಾರೆ. ಲೋಕಪಾಲ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಯಾವುದೇ ಆದೇಶವಿಲ್ಲ. ಸಿಬಿಐ ಕೂಡ ಅಧಿಕೃತವಾಗಿ ಮಾಹಿತಿ ಪ್ರಕಟಿಸಿಲ್ಲ. 'ಮೂಲಗಳು' ಎಂದು ಉಲ್ಲೇಖಿಸುವ ಮೂಲಕ ಕೆಲ ಮಾಧ್ಯಮಗಳು ಸರ್ಕಸ್ ಮಾಡುತ್ತಿವೆ. 13 ಸಾವಿರ ಕೋಟಿ ರೂಪಾಯಿ ಅದಾನಿ ಕಲ್ಲಿದ್ದಲು ಹಗರಣವನ್ನು ತನಿಖಾ ಸಂಸ್ಥೆಗಳು ಮೊದಲು ತನಿಖೆಗೆ ಪಡೆಯಬೇಕು. ಇದಾದ ಬಳಿಕ ನನ್ನ ವಿರುದ್ಧ ತನಿಖೆ ಮಾಡಲಿ ಎಂದು ಮೊಯಿತ್ರಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಲೋಕಪಾಲಕ್ಕೆ ದೂರಿದ್ದ ಬಿಜೆಪಿ:ಬಿಜೆಪಿ ಸಂಸದ ನಿಶಿಕಾಂತ್ ದುಬೆ ಟಿಎಂಸಿ ಸಂಸದೆಯ ವಿರುದ್ಧ ಲೋಕಪಾಲ್‌ಗೆ ದೂರು ನೀಡಿದ್ದರು. ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ. ಹಣಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಇದರ ಜೊತೆಗೆ ಲೋಕಸಭೆಯ ನೈತಿಕ ಸಮಿತಿಯು ತೃಣಮೂಲ ಕಾಂಗ್ರೆಸ್ ನಾಯಕಿ ವಿರುದ್ಧದ ಆರೋಪಗಳನ್ನು ತನಿಖೆ ನಡೆಸಿದೆ. ಸಂಸದ ಸ್ಥಾನದಿಂದ ಅವರನ್ನು ಅನರ್ಹಗೊಳಿಸಬೇಕೆಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶಿಫಾರಸು ಕೂಡ ಮಾಡಿದೆ. ನೈತಿಕ ಸಮಿತಿಯು 15 ಸದಸ್ಯರನ್ನು ಹೊಂದಿದ್ದು, ಅದರಲ್ಲಿ ಆರು ಮಂದಿ ವಿರೋಧ ಪಕ್ಷದವರೂ ಇದ್ದಾರೆ.
ಸಂಸದೆಯ ವಿರುದ್ಧದ ಆರೋಪವನ್ನು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಕುನಾಲ್ ಘೋಷ್ ತಳ್ಳಿಹಾಕಿದ್ದಾರೆ. ಇದು ಬಿಜೆಪಿಯ ರಾಜಕೀಯ ಪಿತೂರಿಯಾಗಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ದುರ್ಬಳಕೆಯಾಗುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳು ಪಕ್ಷದ ಸಂಘಟನೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲು ಅನುಭವಿಸುತ್ತಿದೆ. ಹೀಗಾಗಿ ತೃಣಮೂಲ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ:ಇದು ಕಾಂಗರೂ ಕೋರ್ಟ್ ನಿರ್ಧಾರ, ದೊಡ್ಡ ಜನಾದೇಶದೊಂದಿಗೆ ಮತ್ತೆ ಲೋಕಸಭೆಗೆ ಬರುವೆ: ಮಹುವಾ ಮೊಯಿತ್ರಾ