ಸೋನಿಪತ್ (ಹರಿಯಾಣ) :ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹಣ ವರ್ಗಾವಣೆ ಆರೋಪ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ದಾಳಿ ಸತತ ಎರಡನೇ ದಿನವೂ ಮುಂದುವರೆದಿದೆ. ಐಎನ್‌ಎಲ್‌ಡಿ ಮಾಜಿ ಶಾಸಕ ದಿಲ್‌ಬಾಗ್ ಸಿಂಗ್ ಹಾಗೂ ಅವರ ಸಹಚರರ ಮೇಲಿನ ದಾಳಿ ವೇಳೆ ಜಾರಿ ನಿರ್ದೇಶನಾಲಯವು ವಿದೇಶಿ ನಿರ್ಮಿತ ಶಸ್ತ್ರಾಸ್ತ್ರ, ಸುಮಾರು 300 ಕಾಟ್ರಿಡ್ಜ್‌ಗಳು, 5 ಕೋಟಿ ರೂ. ನಗದು ಮತ್ತು 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧ ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ಗುರುವಾರ ಸೋನಿಪತ್‌ನ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು.
ಐಎನ್‌ಎಲ್‌ಡಿ ಮಾಜಿ ಶಾಸಕ ದಿಲ್‌ಬಾಗ್ ಸಿಂಗ್ ಅವರ ನಿವೇಶನಗಳಲ್ಲಿ ಸುಮಾರು 5 ಕೋಟಿ ರೂಪಾಯಿ ನಗದು, ಅಕ್ರಮ ವಿದೇಶಿ ನಿರ್ಮಿತ ಆಯುಧಗಳು, ಸುಮಾರು 300 ಕಾರ್ಟ್ರಿಡ್ಜ್‌ಗಳು, 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಅಲ್ಲದೆ, 4-5 ಕೆಜಿ ಚಿನ್ನ ಮತ್ತು ಭಾರತ ಮತ್ತು ವಿದೇಶಗಳಲ್ಲಿನ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವೆಡೆ ಶೋಧ ಕಾರ್ಯ ಇನ್ನೂ ಮುಂದುವರೆದಿದೆ.
ಯಮುನಾನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್‌ನಲ್ಲಿ ಸುಮಾರು 20 ಸ್ಥಳಗಳ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದಾಳಿ ನಡೆಸಲಾಗಿದೆ. ದಿಲ್‌ಬಾಗ್ ಸಿಂಗ್ ಅವರು ಯಮುನಾನಗರದ ಭಾರತೀಯ ರಾಷ್ಟ್ರೀಯ ಲೋಕದಳದ (INLD) ಮಾಜಿ ಶಾಸಕರಾಗಿದ್ದಾರೆ.