ನವದೆಹಲಿ:ನಿಷೇಧದ ನಡುವೆಯೂ ಜನರು ಪಟಾಕಿ ಸಿಡಿಸುವುದು ಹೇಗೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಪಟಾಕಿ ಸಿಡಿಸುವವರ ವಿರುದ್ಧದ ಪ್ರಕರಣಗಳು ಪರಿಹಾರವಲ್ಲ, ಬದಲಿಗೆ ಮೂಲವನ್ನು ಹುಡುಕಿ ಕ್ರಮ ಕೈಗೊಳ್ಳಿ ಎಂದು ಒತ್ತಿ ಹೇಳಿದೆ.
ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಎಂಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಐಶ್ವರ್ಯಾ ಭಾಟಿ ಅವರಿಗೆ, ಸರ್ಕಾರದಿಂದ ನಿಷೇಧ ಹೇರಿದಾಗ ಅದು ಸಂಪೂರ್ಣ ನಿಷೇಧ ಎಂದರ್ಥ. ಪಟಾಕಿ ಸಿಡಿಸಲು ನಿಷೇಧವಿದೆ. ನಮಗೆ ಹಸಿರು ಮತ್ತು ಕಪ್ಪು ಪಟಾಕಿ ಇದರ ವ್ಯತ್ಯಾಸವೇ ಅರ್ಥವಾಗುತ್ತಿಲ್ಲ" ಎಂದು ಹೇಳಿದೆ.
ಪಟಾಕಿ ಮಾರಾಟಗಾರರಿಗೆ ಪರವಾನಗಿ ನೀಡುವುದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುತ್ತದೆ. ದೆಹಲಿ ಪೊಲೀಸರು ತಾತ್ಕಾಲಿಕ ಪರವಾನಗಿ ನೀಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಸರ್ಕಾರಕ್ಕೆ ಸೂಚಿಸಿದೆ. ಐಶ್ವರ್ಯಾ ಭಾಟಿ ಅವರು ಸುಪ್ರೀಂ ಕೋರ್ಟ್ನಲ್ಲಿ ಕೇಂದ್ರ ಮತ್ತು ದೆಹಲಿ ಪೊಲೀಸರನ್ನು ಪ್ರತಿನಿಧಿಸಿದರು. ಹಸಿರು ಪಟಾಕಿ ಸಿಡಿಸುವುದನ್ನು ಕೇಂದ್ರ ಬೆಂಬಲಿಸಿದೆ.
ವಿಚಾರಣೆಯ ಸಂದರ್ಭದಲ್ಲಿ, ಪಟಾಕಿ ಸಿಡಿಸುವವರ ವಿರುದ್ಧದ ಪ್ರಕರಣಗಳು ಪರಿಹಾರವಾಗುವುದಿಲ್ಲ. ನೀವು ಮೂಲವನ್ನು ಹುಡುಕಿ ಕ್ರಮ ಕೈಗೊಳ್ಳಬೇಕು ಎಂದು ಪೀಠವು ಎಎಸ್ಜಿಗೆ ತಿಳಿಸಿದೆ. ಸರ್ಕಾರ ಇದನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಬೇಕು. ಜನರು ಪಟಾಕಿ ಸಿಡಿಸಿದ ನಂತರ ಕ್ರಮ ಕೈಗೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ನ್ಯಾಯಮೂರ್ತಿ ಸುಂದ್ರೇಶ್ ಹೇಳಿದರು.