ಹೈದರಾಬಾದ್ : ಅಮೆರಿಕದ ಕೇಸ್ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯವು ಹೈದರಾಬಾದಿನ ವಿದ್ಯಾರ್ಥಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗವನ್ನು ಮುಂದುವರೆಸಲು 1.30 ಕೋಟಿ ರೂ ವಿದ್ಯಾರ್ಥಿವೇತನವನ್ನು ನೀಡಿದೆ. ಈ ಬಗ್ಗೆ ವಿಶ್ವವಿದ್ಯಾಲಯವು ಸ್ವೀಕಾರ ಪತ್ರ ಮತ್ತು ವಿದ್ಯಾರ್ಥಿವೇತನ ಪತ್ರವನ್ನು ವಿದ್ಯಾರ್ಥಿಗೆ ಕಳುಹಿದೆ.
ಇಲ್ಲಿನ ಗಚಿಬೌಲಿಯ ಖಾಸಗಿ ಶಾಲೆಯಲ್ಲಿ ICSE ಪಠ್ಯಕ್ರಮದೊಂದಿಗೆ 12 ನೇ ತರಗತಿ ಪೂರ್ಣಗೊಳಿಸಿರುವ ವೇದಾಂತ್(18), ಈ ಮೂಲಕ ಅಮೆರಿಕದಲ್ಲಿ ನರವಿಜ್ಞಾನವನ್ನು ಅಧ್ಯಯನ ಮಾಡಲಿದ್ದಾರೆ. ಶೈಕ್ಷಣಿಕ ಅವಕಾಶಗಳು ಮತ್ತು ತರಬೇತಿಯ ಮೂಲಕ ವಿದ್ಯಾರ್ಥಿಗಳನ್ನು ಪೋಷಿಸುವ ಡೆಕ್ಸ್‌ಟೆರಿಟಿ ಗ್ಲೋಬಲ್ ಸಂಸ್ಥೆ ಈ ವಿದ್ಯಾರ್ಥಿಯನ್ನು ಗುರುತಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಿದೆ. ಇದೇ ತಿಂಗಳ 12ರಂದು ವೇದಾಂತ್ ಅಮೆರಿಕಕ್ಕೆ ತೆರಳಲಿದ್ದಾರೆ.