ಜೈಪುರ (ರಾಜಸ್ಥಾನ) :ರಾಜಸ್ಥಾನದಲ್ಲಿ ಶೀಘ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ತುರುಸಿನ ಪ್ರಚಾರ ನಡೆಸುತ್ತಿವೆ. ವಿಪಕ್ಷ ಬಿಜೆಪಿಯಿಂದ ಪರಿವರ್ತನಾ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದ್ದು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪ ಕೇಳಿಬಂದಿದೆ. ಇದರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಇಲ್ಲಿನ ಸಿರೋಹಿಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ತಮ್ಮ ಭಾಷಣದಲ್ಲಿ ಕೋಮುಗಳ ನಡುವೆ ದ್ವೇಷ ಮೂಡಿಸುವ ಹೇಳಿಕೆ ನೀಡಿದ್ದಾರೆ. ಹಿಂದಿನ ಘಟನೆಗಳನ್ನು ಪ್ರಸ್ತಾಪಿಸಿ ಜನರನ್ನು ಪ್ರಚೋದಿಸಿದ್ದಾರೆ ಎಂದು ದೂರು ಕೇಳಿಬಂದಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇಂದ್ರ ಸಚಿವರ ಭಾಷಣದಲ್ಲಿ ಏನಿತ್ತು?:ಸಿರೋಹಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಗಜೇಂದ್ರ ಶೇಖಾವತ್ ಅವರು, ಈ ಹಿಂದೆ ನಡೆದ ಘಟನೆಗಳನ್ನು ಪ್ರಸ್ತಾಪಿಸಿ, ರಾಮನವಮಿ ಮೆರವಣಿಗೆಯ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದರು. ಬಹುಸಂಖ್ಯಾತ ಸಮುದಾಯದವರನ್ನು ಥಳಿಸಲಾಗಿದೆ. ರಾಮನ ಮೇಲೆ ಪೆಟ್ರೋಲ್ ಬಾಂಬ್ ಎಸೆದರು. ಹಿಂದೂಗಳ ಅಂಗಡಿಗಳನ್ನು ಸುಟ್ಟರು. ನಮ್ಮನ್ನು ಲೂಟಿ ಮಾಡಿದರು. ಬಹುಸಂಖ್ಯಾತ ಸಮುದಾಯದ ದ್ವಿಚಕ್ರ ವಾಹನಗಳನ್ನು ಒಡೆದು ಹಾಕಿದರು. ರಾಮನವಮಿ ಯಾತ್ರೆಯಲ್ಲಿ ಭಾಗವಹಿಸುವ ತಾಯಂದಿರು ಮತ್ತು ಸಹೋದರಿಯರ ಬಟ್ಟೆಗಳನ್ನು ಹರಿದು ಶಾಂತಿ ಕದಡುವ ಪ್ರಯತ್ನಗಳು ನಡೆದವು ಎಂದೆಲ್ಲಾ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.