ನವದೆಹಲಿ: ವಿಮಾನಯಾನ ನಿಯಂತ್ರಕರಾದ ಬಿಸಿಎಎಸ್ ಮತ್ತು ಡಿಜಿಸಿಎ ಬುಧವಾರ ಇಂಡಿಗೊ, ಮುಂಬೈ ವಿಮಾನ ನಿಲ್ದಾಣ ಆಪರೇಟರ್ ಎಂಐಎಎಲ್, ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್‌ಗೆ ಒಟ್ಟು 2.70 ಕೋಟಿ ರೂ.ಗಳ ದಂಡ ವಿಧಿಸಿದೆ. ಮುಂಬೈ ವಿಮಾನ ನಿಲ್ದಾಣದ ಟಾರ್ಮಾಕ್ನಲ್ಲಿ ಇಂಡಿಗೊ ಪ್ರಯಾಣಿಕರು ಆಹಾರ ಸೇವಿಸುತ್ತಿರುವ ವೀಡಿಯೊ ವ್ಯಾಪಕವಾಗಿ ವೈರಲ್ ಆದ ನಂತರ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಇಂಡಿಗೊ ವಿಮಾನಯಾನ ಸಂಸ್ಥೆಗೆ 1.20 ಕೋಟಿ ರೂ ಮತ್ತು ಎಂಐಎಎಲ್ಗೆ 60 ಲಕ್ಷ ರೂ.ಗಳ ದಂಡ ವಿಧಿಸಿದೆ.
ಪ್ರತ್ಯೇಕವಾಗಿ, ಕಡಿಮೆ ಗೋಚರತೆ ಪರಿಸ್ಥಿತಿಗಳಲ್ಲಿ ವಿಮಾನಗಳನ್ನು ನಿರ್ವಹಿಸಲು ಪೈಲಟ್ಗಳ ರೋಸ್ಟರ್ ಪದ್ಧತಿ ಅನುಸರಿಸಲು ವಿಫಲವಾದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್‌ಗೆ ತಲಾ 30 ಲಕ್ಷ ರೂ.ಗಳ ದಂಡ ವಿಧಿಸಿದೆ. ದಟ್ಟ ಮಂಜಿನಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರದಲ್ಲಿ ವಿಪರೀತ ಅಸ್ತವ್ಯಸ್ತಗಳು ಕಂಡುಬಂದ ಎರಡು ವಾರಗಳ ನಂತರ ಈ ದಂಡದ ಕ್ರಮ ಕೈಗೊಳ್ಳಲಾಗಿದೆ.
ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (ಬಿಸಿಎಎಸ್) ಮತ್ತು ಡಿಜಿಸಿಎ ಒಂದೇ ದಿನದಲ್ಲಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ ಭಾರಿ ದಂಡ ವಿಧಿಸುವುದು ಅಪರೂಪ. ಆದರೆ ದೆಹಲಿ ಮತ್ತು ಇತರ ವಿಮಾನ ನಿಲ್ದಾಣಗಳಲ್ಲಿ ಮಂಜು ಸಂಬಂಧಿತ ವಿಮಾನ ಸಂಚಾರದ ಅಡೆತಡೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿಯಂತ್ರಕ ಸಂಸ್ಥೆಗಳು ಈ ಕಠಿಣ ಕ್ರಮಕ್ಕೆ ಮುಂದಾಗಿವೆ.