ನವದೆಹಲಿ:ಭಾನುವಾರಜಂತರ್ ಮಂತರ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪ್ರತಿಭಟನಾಕಾರ ಕುಸ್ತಿಪಟುಗಳು ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಕುಸ್ತಿಪಟುಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಪ್ರತಿಭಟನೆಯ ಇತರ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ನಡುವೆಯೇ ರಾತ್ರಿ ವೇಳೆ ಕೆಲ ಕುಸ್ತಿಪಟುಗಳು ಜಂತರ್ ಮಂತರ್‌ಗೆ ಆಗಮಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಇದಕ್ಕೆ ಅವಕಾಶ ಕೊಡದೆ ಅವರನ್ನು ವಾಪಸ್ ಕಳುಹಿಸಲಾಯಿತು. ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 147, 149, 186, 188, 332, 353, ಪಿಡಿಪಿಪಿ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಕುಸ್ತಿಪಟುಗಳು ಮತ್ತು ಇತರೆ ಪ್ರತಿಭಟನಾಕಾರರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಭಾನುವಾರ ತಡರಾತ್ರಿ ಕುಸ್ತಿಪಟು ಬಜರಂಗ್ ಪುನಿಯಾ ಮಾಧ್ಯಮದೊಂದಿಗೆ ಮಾತನಾಡಿ, "ಹೊಸ ಸಂಸತ್ ಭವನ, ಲೋಕತಂತ್ರ ಭವನದ ಉದ್ಘಾಟನೆಯಾಗಿದೆ. ಅದರಲ್ಲಿ ಆರೋಪಿಯೊಬ್ಬ ಕುಳಿತಿರುವುದು ದೇಶದ ದೌರ್ಭಾಗ್ಯವೇ ಸರಿ" ಎಂದರು. ಜಂತರ್ ಮಂತರ್ ಅಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂಬ ಮಾಧ್ಯಮದ ಪ್ರಶ್ನೆಗೆ, "ಬ್ರಿಜ್ ಭೂಷಣ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ಪೊಲೀಸರು 7 ದಿನಗಳ ಕಾಲ ಸಮಯ ತೆಗದುಕೊಂಡರು. ಆದರೆ ಕುಸ್ತಿಪಟುಗಳ ವಿರುದ್ಧ ಕೇಸು ದಾಖಲಿಸಲು 7 ಗಂಟೆಯೂ ತೆಗೆದುಕೊಳ್ಳಲಿಲ್ಲ. ಇದಕ್ಕೆ ದೆಹಲಿ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕು" ಎಂದು ಕಿಡಿ ಕಾರಿದರು.