ಭಿಂಡ್(ಮಧ್ಯಪ್ರದೇಶ):ಕೋವಿಡ್ ನಿಯಂತ್ರಿಸಲು ಸರ್ಕಾರ ಅನೇಕ ನಿಯಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಹೀಗಿದ್ದರೂ ಜನರು ಮಾತ್ರ ಕ್ಯಾರೆನ್ನದೆ ಮದುವೆ ಮುಂತಾದ ಸಮಾರಂಭಗಳಲ್ಲಿ ಭಾಗಿಯಾಗಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಇಂಥವರ ವಿರುದ್ಧ ಮಧ್ಯಪ್ರದೇಶದ ಪೊಲೀಸರು ವಿಭಿನ್ನ ಅಸ್ತ್ರ ಪ್ರಯೋಗಿಸಿದರು.
ಕೋವಿಡ್ ಕಾಲದಲ್ಲಿ ಗ್ರ್ಯಾಂಡ್ ಮದುವೆ: ಅತಿಥಿಗಳಿಗೆ ರಸ್ತೆಯುದ್ದಕ್ಕೂ ಕಪ್ಪೆ ಓಟದ ಶಿಕ್ಷೆ- ವಿಡಿಯೋ ನೋಡಿ - ಕೋವಿಡ್ ನಿಯಮ ಉಲ್ಲಂಘನೆ
ಕೋವಿಡ್ ಯುಗದಲ್ಲಿ ಗ್ರ್ಯಾಂಡ್ ಆಗಿ ಮದುವೆ ಮಾಡುತ್ತಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ನೂರಕ್ಕೂ ಹೆಚ್ಚು ಜನರಿಗೆ ಕಪ್ಪೆ ಓಟದ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕೋವಿಡ್ ಸೋಂಕು ತಡೆಗಟ್ಟುವ ಸಲುವಾಗಿ ಇಲ್ಲಿನ ಸ್ಥಳೀಯಾಡಳಿತ ಜಾರಿಗೆ ತಂದ ಮಾರ್ಗಸೂಚಿ ಪ್ರಕಾರ, ಮದುವೆ ಸಮಾರಂಭಗಳಲ್ಲಿ ಜನಸಂದಣಿ ನಿಷೇಧಿಸಲಾಗಿದೆ. ಆದರೆ ಭಿಂಡ್ ಎಂಬಲ್ಲಿ ನಡೆದ ಮದುವೆಯಲ್ಲಿ 200ಕ್ಕೂ ಹೆಚ್ಚು ಅತಿಥಿಗಳು ಭಾಗಿಯಾಗಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡುವುದಕ್ಕೆ ಶುರುವಿಟ್ಟುಕೊಂಡ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ರಸ್ತೆಯುದ್ದಕ್ಕೂ ಕಪ್ಪೆ ಓಟದ ಶಿಕ್ಷೆ ನೀಡಿದ್ದಾರೆ. ಜೊತೆಗೆ ಮಾರ್ಗಸೂಚಿ ಉಲ್ಲಂಘಿಸಿದ್ದಕ್ಕಾಗಿ ಮದುವೆ ಆಯೋಜಕರ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದಾರೆ. ಈ ಕಪ್ಪೆ ಓಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.