ಮುಂಬೈ:ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದಲ್ಲಿ ಕೇಂದ್ರ ಸಚಿವ ನಾರಾಯಣ್ ರಾಣೆ ವಿರುದ್ಧ ವಿವಿಧ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರಲ್ಲಿ ಬೆನ್ನಲ್ಲೇ ಅಲ್ಲಿನ ಪೊಲೀಸ್ ಕಮಿಷನರ್ ರಾಣೆ ಅವರನ್ನು ಬಂಧಿಸುವಂತೆ ಆದೇಶಿಸಿದ್ದು, ಡಿಸಿಪಿ ಸಂಜಯ್ ಬರ್ಕುಂದ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ.
ಕೇಂದ್ರ ಸಚಿವ ನಾರಾಯಣ್ ರಾಣೆ ವಿರುದ್ಧ ನಾಸಿಕ್ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಶಿವಸೇನಾ ಮುಖಂಡ ಸುಧಾಕರ್ ಬಡ್ಗುಜರ್ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾಸಿಕ್ ಮಾತ್ರವಲ್ಲದೆ ರಾಯ್‌ಗಢ್, ಔರಂಗಾಬಾದ್, ಪುಣೆ ಸೇರಿದಂತೆ ಇತರೆ ಹಲವು ನಗರಗಳಲ್ಲಿ ಸಚಿವರ ವಿರುದ್ಧ ಐಪಿಸಿ ಸೆಕ್ಷನ್ 500, 502, 505, 153ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಮುಂಜಾಗ್ರತಾ ಕ್ರಮವಾಗಿ ಮುಂಬೈನ ಜುಹುವಿನಲ್ಲಿರುವ ಸಚಿವರ ಮನೆಗೆ ಭದ್ರತೆ ಒದಗಿಸಲಾಗಿದೆ.
ರಾಣೆ ವಿವಾದಾತ್ಮಕ ಹೇಳಿಕೆಯೇನು?
'ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷದ ಬಗ್ಗೆ ಗೊತ್ತಿಲ್ಲ ಎಂದು ರಾಣೆ ಇತ್ತೀಚೆಗೆ ಕಿಡಿಕಾರಿದ್ದರು. ಸಿಎಂಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಅವರು ತಮ್ಮ ಭಾಷಣದ ಸಮಯದಲ್ಲಿ ಸ್ವಾತಂತ್ರ್ಯದ ವರ್ಷದ ಬಗ್ಗೆ ವಿಚಾರಿಸಲು ಹಿಂದಕ್ಕೆ ಸರಿದರು. ನಾನು ಅಲ್ಲಿದ್ದಿದ್ದರೆ ಅವನಿಗೆ ಒಂದು ಕಪಾಳಕ್ಕೆ ಹೊಡೆಯುತ್ತಿದ್ದೆ' ಎಂದು ರಾಣೆ ನಿನ್ನೆ ರಾಯಗಢ ಜಿಲ್ಲೆಯ ಜನಾಶೀರ್ವಾದ ಯಾತ್ರೆಯಲ್ಲಿ ಹೇಳಿದ್ದರು.