ನವದೆಹಲಿ : ಸಿಂಗಾಪುರ ರಾಯಭಾರಿ ಕಚೇರಿಯ ನಕಲಿ ನಂಬರ್ ಪ್ಲೇಟ್ ಹೊಂದಿರುವ ಕಾರು ರಾಜಧಾನಿ ದೆಹಲಿಯಲ್ಲಿ ಪತ್ತೆಯಾಗಿದೆ. ಭಾರತದಲ್ಲಿ ಸಿಂಗಾಪುರದ ರಾಯಭಾರಿ ಸೈಮನ್ ವಾಂಗ್ ಕಾರಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಶುಕ್ರವಾರ ಚಿತ್ರವನ್ನು ಹಂಚಿಕೊಂಡ ನಂತರ ಅವರು ವಿದೇಶಾಂಗ ಸಚಿವಾಲಯ ಮತ್ತು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಸಿಂಗಾಪುರದ ಹೈ ಕಮಿಷನರ್ ಸೈಮನ್ ವಾಂಗ್ ಅವರು, ಟ್ವಿಟ್ಟರ್ನಲ್ಲಿ ತಮ್ಮ ದೇಶದ ನಕಲಿ ರಾಜತಾಂತ್ರಿಕ ಕಾರ್ಪ್ಸ್ ನಂಬರ್ ಪ್ಲೇಟ್ ಹೊಂದಿರುವ ಸಿಲ್ವರ್ ಬಣ್ಣದ ಕಾರಿನ ಹಲವಾರು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, "ಇದು ನಮ್ಮ ರಾಯಭಾರಿ ಕಾರು ಅಲ್ಲ" ಎಂದು ತಿಳಿಸಿದ್ದಾರೆ.
ನಂಬರ್ ಪ್ಲೇಟ್ ಮೇಲೆ 63 ಸಿಡಿ ಎಂದು ಬರೆಯಲಾಗಿದೆ. ಈ ಕಾರು ನಕಲಿ ಎಂದು ವಾಂಗ್ ಹೇಳಿದ್ದಾರೆ. ಇದು ನಮ್ಮ ರಾಯಭಾರಿ ಕಚೇರಿಯ ಕಾರು ಅಲ್ಲ. ಈ ಬಗ್ಗೆ ನಾವು ವಿದೇಶಾಂಗ ಸಚಿವಾಲಯ ಮತ್ತು ದೆಹಲಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದೇವೆ. ಸುತ್ತಲೂ ಹಲವಾರು ಅಪಾಯಗಳಿರುವಾಗ, ಈ ಕಾರನ್ನು ಇಲ್ಲಿ ನಿಲ್ಲಿಸಿದ್ದಾರೆ. ಹೀಗಾಗಿ ನೀವು ಹೆಚ್ಚು ಜಾಗರೂಕರಾಗಿರಿ. ವಿಶೇಷವಾಗಿ ಐಜಿಐ ವಿಮಾನ ನಿಲ್ದಾಣ ಪೊಲೀಸರಿಗೆ ಈ ವಿಷಯದ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.