ಕರೀಂಗಂಜ್(ಅಸ್ಸೋಂ) :ಕಾರುಗಳ ಕ್ರೇಜ್ ಹಚ್ಚಿಕೊಂಡವರು ಲ್ಯಾಂಬರ್ಗಿನಿ ಬಗ್ಗೆ ಕೇಳದೆ ಇರಲು ಸಾಧ್ಯವಿಲ್ಲ. ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಈ ಕಾರಿಗೆ ಅಗ್ರಸ್ಥಾನವಿದೆ. ಈ ಕಾರನ್ನು ಖರೀದಿಸುವುದು ಕೆಲವರ ಜೀವಮಾನದ ಕನಸಾಗಿರುತ್ತೆ. ಆದ್ರೆ, ಕಾರಿನ ಬೆಲೆ ಕೇಳಿ ಅದರ ಹತ್ತಿರಕ್ಕೂ ಸುಳಿಯುವುದು ಅಸಾಧ್ಯ. ಆದ್ರೆ, ಅಸ್ಸೋಂನ ಕರೀಂಗಂಜ್ ಜಿಲ್ಲೆಯ ಮೆಕ್ಯಾನಿಕ್ ಒಬ್ಬ ಸ್ವತಃ ತಾನೇ ಲ್ಯಾಂಬರ್ಗಿನಿ ಕಾರನ್ನ ತಯಾರಿಸಿ, ಜೀವನದ ಕನಸನ್ನ ಸಾಕಾರಗೊಳಿಸಿದ್ದಾನೆ.
ಕರೀಂಗಂಜ್ ಜಿಲ್ಲೆಯ ಮೆಕ್ಯಾನಿಕ್ ನೂರುಲ್ ಹಕ್ ಮಾರುತಿ ಸ್ವಿಫ್ಟ್ ಕಾರನ್ನೇ ಐಷಾರಾಮಿ ಕಾರನ್ನಾಗಿ ಪರಿವರ್ತಿಸಿದ್ದಾರೆ. ಕೊರೊನಾ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದ ವೇಳೆ ತನ್ನ ಹಳೆಯ ಮಾರುತಿ ಸ್ವಿಫ್ಟ್ ಕಾರನ್ನೇ ಲಾಂಬೋರ್ಗಿನಿಯಾಗಿ ಪರಿವರ್ತಿಸಲು ಆರಂಭಿಸಿದ್ದಾರೆ. ಕೆಲ ತಿಂಗಳಲ್ಲೇ ಹಳೆ ಕಾರು ಐಷಾರಾಮಿ ಕಾರಾಗಿ ಮೇಕ್ ಓವರ್ಗೊಂಡಿದೆ.
ಹಳೆಯ ಕಾರನ್ನ ಐಷಾರಾಮಿ ಕಾರಾಗಿಸಿದ ಮೆಕ್ಯಾನಿಕ್ ನೂರುಲ್ ತನ್ನ ಸ್ನೇಹಿತರ ಸಹಾಯದಿಂದ ವಾಹನವನ್ನು ಮಾರ್ಪಡಿಸಿದ್ದಾನೆ. ಈ ಕಾರ್ಯಕ್ಕಾಗಿ ಅವರು ಸುಮಾರು 6.20 ಲಕ್ಷ ರೂಪಾಯಿ ವ್ಯಯಿಸಿದ್ದಾರಂತೆ. ಕುಟುಂಬ ಮತ್ತು ಸ್ನೇಹಿತರ ಪ್ರೋತ್ಸಾಹದೊಂದಿಗೆ ಹಳೆ ಕಾರಿಗೆ ಹೊಸ ರೂಪ ನೀಡಿದ್ದಾರೆ. ಇದಲ್ಲದೆ ಇನ್ನೊಂದು ಕಾರನ್ನು ಫೆರಾರಿಯಂತೆ ರೂಪಾಂತರಿಸಲು ಮುಂದಾಗಿದ್ದಾರೆ.
ನೂರುಲ್ ಈಗ ತನ್ನ ಕನಸಿನ ಕಾರನ್ನು ತಯಾರಿಸಿ ಸಂತಸಗೊಂಡಿದ್ದಾರೆ. ಆದರೆ, ಅದಕ್ಕೆ ಬೇಕಾದ ಅಗತ್ಯ ದಾಖಲೆ ಇಲ್ಲದ ಕಾರಣ ರಸ್ತೆ ಮೇಲೆ ಓಡಿಸಲು ಸಾಧ್ಯವಾಗುತ್ತಿಲ್ಲ. ಈ ಕಾರನ್ನು ನೋಂದಣಿ ಮಾಡಿಸಲು ಸಾಧ್ಯವಿಲ್ಲ. ಹಳೆಯ ಕಾರನ್ನು ರೂಪಾಂತರಿಸಿದ ಹಿನ್ನೆಲೆ ನಿಖರ ದಾಖಲಾತಿ ಸೃಷ್ಟಿಗೆ ಅಡ್ಡಿಯುಂಟಾಗಿದೆ.
ಅವರ ಕನಸಿನ ಲ್ಯಾಂಬರ್ಗಿನಿ ತಯಾರಿಸಿ ಈಗ ದಾಖಲಾತಿಗಾಗಿ ಓಡಾಡುತ್ತಿದ್ದಾರೆ. ಈ ದಾಖಲಾತಿಗಳ ಒಟ್ಟುಗೂಡಿಸಲು ಇನ್ನಷ್ಟು ಸಮಯ ಹಿಡಿಯಬಹುದು. ಆದರೆ, ಅವರ ಕನಸ್ಸಂತು ಈಡೇಸಿರಿದ್ದು, ಮುಂದೊಂದು ದಿನ ಜನ ರಸ್ತೆ ಮೇಲೆ ಅಗ್ಗದ ಲ್ಯಾಂಬರ್ಗಿನಿ ಕಾರು ಘರ್ಜಿಸುವುದನ್ನ ಕಾಣಬಹುದು.