ಜೋಧ್ಪುರ (ರಾಜಸ್ಥಾನ) :ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದನ್ನು ಪ್ರಶ್ನಿಸುತ್ತಿದ್ದ ಗೃಹರಕ್ಷಕ ದಳ ಸಿಬ್ಬಂದಿ ಮೇಲೆಯೇ ಚಾಲಕನೊಬ್ಬ ಕಾರು ಹತ್ತಿಸಲು ಯತ್ನಿಸಿದ್ದಾನೆ. ಗಾರ್ಡ್ ಕಾರಿನ ಮೇಲೆ ಕುಳಿತಾಗ 500 ಮೀಟರ್ ದೂರಕ್ಕೆ ಎಳೆದೊಯ್ದು ದಿಢೀರ್ ಬ್ರೇಕ್ ಹಾಕಿ ಕೆಳಗೆ ಬೀಳಿಸಿ ಪರಾರಿಯಾಗಿದ್ದಾನೆ. ಇದರಿಂದ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೋಧಪುರ ನಗರದಲ್ಲಿ ಕಾರು ಚಾಲಕನೊಬ್ಬ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಅಲ್ಲಿದ್ದ ಹೋಮ್ ಗಾರ್ಡ್ ಕಾರನ್ನು ತಡೆದು ಟ್ರಾಫಿಕ್ ನಿಯಮ ಪಾಲಿಸುವಂತೆ ಬುದ್ಧಿವಾದ ಹೇಳಿದ್ದಾನೆ. ಇದರಿಂದ ಕುಪಿತನಾದ ಚಾಲಕ ಹೋಮ್ ಗಾರ್ಡ್ ಮೇಲೆಯೇ ವಾಹನ ಹತ್ತಿಸಲು ಮುಂದಾಗಿದ್ದಾನೆ. ತಕ್ಷಣವೇ ಎಚ್ಚೆತ್ತ ಗಾರ್ಡ್, ಕಾರಿನ ಮೇಲೆ ಜಿಗಿದು ಬಾನೆಟ್ ಮೇಲೆ ಹಾರಿದ್ದಾನೆ.
ರಕ್ಕಸ ಚಾಲಕ ಕಾರನ್ನು 500 ಮೀಟರ್ ದೂರದವರೆಗೆ ಚಲಾಯಿಸಿಕೊಂಡು ಹೋಗಿದ್ದಾನೆ. ನಿಲ್ಲಿಸಲು ಗಾರ್ಡ್ ಕೇಳಿಕೊಂಡರೂ ಆತ ಬಿಡದೇ ಕಾರನ್ನು ವೇಗವಾಗಿ ಓಡಿಸಿದ್ದಾನೆ. ಬಳಿಕ ಪೊಲೀಸ್ ಕಮಿಷನರ್ ಕಚೇರಿ ಎದುರಿಗೆ ಬಂದ ಬಳಿಕ ಕಾರಿಗೆ ದಿಢೀರ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಹೋಮ್ ಗಾರ್ಡ್ ರೊಪ್ಪನೆ ನೆಲಕ್ಕೆ ಅಪ್ಪಳಿಸಿದ್ದಾನೆ. ಇದರಿಂದ ಆತನ ತಲೆ, ಸೊಂಟ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಗಾರ್ಡ್ ಅನ್ನು ನೆಲಕ್ಕೆ ಬೀಳಿಸಿದ್ದೇ ತಡ ಕಾರು ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.