ಚಂಡೀಗಢ(ಪಂಜಾಬ್):ಭಾರತೀಯ ಚುನಾವಣಾ ಆಯೋಗವು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪಕ್ಷವಾದ 'ಪಂಜಾಬ್ ಲೋಕ ಕಾಂಗ್ರೆಸ್'ಗೆ ಹಾಕಿ ಸ್ಟಿಕ್ ಮತ್ತು ಬಾಲ್ನ ಚಿಹ್ನೆಯನ್ನು ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಪಕ್ಷ ಹಾಕಿ ಸ್ಟಿಕ್ ಮತ್ತು ಬಾಲ್ ಅನ್ನು ಚಿಹ್ನೆಯನ್ನಾಗಿ ಸ್ವೀಕರಿಸಿದೆ. ಈ ಕುರಿತು ಸಂತಸವಾಗುತ್ತಿದೆ. ಬಸ್ ಹಮ್ ಗೋಲ್ ಕರ್ನಾ ಬಾಕಿ (ಇನ್ನು ಗೋಲು ಗಳಿಸುವುದು ಮಾತ್ರ ಬಾಕಿ ಇದೆ) ಎಂದು ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ಭರವಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪಂಜಾಬ್‌ನ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, 'ಬಸ್ ಹಮ್ ಗೋಲ್ ಕರ್ನಾ ಬಾಕಿ' ವಾಕ್ಯವನ್ನು ಚುನಾವಣೆಗೆ ಟ್ಯಾಗ್ಲೈನ್ ಎಂದು ಅಂದಾಜಿಸಲಾಗುತ್ತಿದೆ.
ಮೂರೂವರೆ ತಿಂಗಳ ಹಿಂದೆ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದ್ದು, ಆಗ ಕಾಂಗ್ರೆಸ್ಗೆ ಗುಡ್ಬೈ ಹೇಳಿದ ಕ್ಯಾಪ್ಟನ್ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದ್ದರು. ಮುಂಬರುವ ಚುನಾವಣೆಯಲ್ಲಿ ನೂತನ ಪಕ್ಷ ಸ್ಪರ್ಧೆ ಮಾಡಲಿದೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಅಮರಿಂದರ್ ಅವರ ಪಕ್ಷ ಅಖಾಡಕ್ಕಿಳಿಯಲಿದೆ. ಶಿರೋಮಣಿ ಅಕಾಲಿದಳ ಕೂಡಾ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು, ಇನ್ನೂ ಸೀಟು ಹಂಚಿಕೆಯಾಗಿಲ್ಲ.
ಸ್ಥಾನ ಹಂಚಿಕೆಗಾಗಿ ಬಿಜೆಪಿ, ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಅಕಾಲಿದಳ ಜಂಟಿಯಾಗಿ 6 ಸದಸ್ಯರ ಸಮಿತಿಯನ್ನು ರಚಿಸಿವೆ. ಸೀಟುಗಳ ಹಂಚಿಕೆ ನಂತರ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಇದನ್ನೂ ಓದಿ:ಬಿಜೆಪಿ ನಮಗೆ 8-10 ಸ್ಥಾನ ನೀಡದಿದ್ದರೆ ಯುಪಿಯಲ್ಲಿ ಸ್ವತಂತ್ರ ಸ್ಪರ್ಧೆ: ಕೇಂದ್ರ ಸಚಿವ ಅಠವಾಳೆ