ನವದೆಹಲಿ:ಪಂಜಾಬ್‌ನ ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದೆ. ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ನವದೆಹಲಿಗೆ ಬಂದು ಬಿಜೆಪಿಯ ಚಾಣಕ್ಯ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದರು ಎಂಬ ವಿಚಾರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಅಧಿಕಾರದಿಂದ ಕೆಳಗಿಳಿದ ಮೇಲೆ ಇದೇ ಮೊದಲ ಬಾರಿಗೆ ಅಮರೀಂದರ್ ದೆಹಲಿಗೆ ಭೇಟಿ ನೀಡಿ, ಬಿಜೆಪಿ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕೊಡಲಾಗುತ್ತದೆ ಎಂಬ ಊಹಾಪೋಹಗಳೂ ಹರಿದಾಡುತ್ತಿವೆ.
ಈ ಬಗ್ಗೆ ಕ್ಯಾಪ್ಟನ್ ಹೇಳೋದೇನು..?
ದೆಹಲಿಗೆ ತೆರಳಿದ ವಿಚಾರದ ಬಗ್ಗೆ ಮಾತನಾಡಿದ ಅಮರೀಂದರ್ ಸಿಂಗ್, ತಾವು ದೆಹಲಿಗೆ ಸ್ನೇಹಿತರನ್ನು ಮತ್ತು ಬೆಂಬಲಿಗರನ್ನು ಭೇಟಿ ಮಾಡಿದ್ದಾಗಿಯೂ, ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ಬೆಂಬಲಿಗರೊಂದಿಗೆ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾದ ರವೀನ್ ತುಕ್ರಾಲ್ ಟ್ವೀಟ್ ಮಾಡಿ ಅಮರೀಂದರ್ ಅವರ ದೆಹಲಿ ಭೇಟಿ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಇದು ಅವರ ವೈಯಕ್ತಿಕ ಭೇಟಿಯಾಗಿದ್ದು, ಸ್ನೇಹಿತರು ಮತ್ತು ಬೆಂಬಲಿಗರನ್ನು ಭೇಟಿಯಾಗಿದ್ದಾರೆ. ಹಾಗೆಯೇ ಕಪುರ್ತಲಾದಲ್ಲಿರುವ ಸರ್ಕಾರದ ಸಿಎಂ ನಿವಾಸವನ್ನು ಖಾಲಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೆಪ್ಟೆಂಬರ್ 18ರಂದು ಪಂಜಾಬ್‌ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೊತೆಗೆ ನವಜೋತ್ ಸಿಂಗ್ ಸಿಧು ಅನ್ನು ಮುಂದಿನ ಸಿಎಂ ಆಗಿ ಒಪ್ಪಿಕೊಳ್ಳಲು ನಿರಾಕರಿಸಿದ್ದರು. ಇದೇ ಕಾರಣದಿಂದ ಸಿಎಂ ಪಟ್ಟ ಚರಣ್ಜಿತ್ ಸಿಂಗ್ ಚೆನ್ನಿ ಆಯ್ಕೆಯಾಗಿದ್ದರು.