ಪಂಜಾಬ್:ಕಾಂಗ್ರೆಸ್ನಿಂದ ವಿರುದ್ಧ ಸಿಡಿದು ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಿದ್ದಲ್ಲದೇ ಅವರೂ ಸೇರ್ಪಡೆಯಾಗಿದ್ದಾರೆ. ಸಿಂಗ್ ಜೊತೆಗೂಡಿ ಕೆಲ ಶಾಸಕರು, ನಾಯಕರು ಕೇಸರಿ ಧ್ವಜ ಹಿಡಿದರು.
ಇಂದು ಬಿಜೆಪಿ ಪಂಜಾಬ್ ಪ್ರಧಾನ ಕಚೇರಿಯಲ್ಲಿ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಕಿರಣ್ ರಿಜಿಜು ಅವರ ಸಮ್ಮುಖದಲ್ಲಿ ಅಮರಿಂದರ್ ಸಿಂಗ್ ಅವರು ಔಪಚಾರಿಕವಾಗಿ ಬಿಜೆಪಿಗೆ ಸೇರಿದರು. ಇದಕ್ಕೂ ಮುನ್ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಪಕ್ಷ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದರು.
ಬಿಜೆಪಿ ಸೇರಿದ ಬಳಿಕ ಮಾತನಾಡಿದ ಅಮರಿಂದರ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಕಾನೂನು ಸಚಿವ ಕಿರಣ್ ರಿಜಿಜು ಮಾತನಾಡಿ, ಅಮರಿಂದರ್ ಸಿಂಗ್ ಪಕ್ಷ ಸೇರಿರುವುದನ್ನು ಶ್ಲಾಘಿಸಿ, ದೇಶದ ಬಗ್ಗೆ ಚಿಂತಿಸುವ ವ್ಯಕ್ತಿಗಳು ಒಂದೆಡೆ ಇರುವುದು ಉತ್ತಮ.
ಪಂಜಾಬ್‌ನಂತಹ ಸೂಕ್ಷ್ಮ ರಾಜ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸಿಂಗ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ರಾಜಕೀಯ ಮಾಡಿಲ್ಲ ಎಂದರು. ಈ ಮೊದಲು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅಮರಿಂದರ್ ಸಿಂಗ್ ಅವರು ಭೇಟಿ ಮಾಡಿದ ನಂತರ ಸಿಂಗ್ ಅವರು ಬಿಜೆಪಿ ಸೇರುವ ಘೋಷಣೆ ಮಾಡಿದ್ದರು.