ನವದೆಹಲಿ: ಬ್ಯಾಂಕೇತರ ಹಣಕಾಸು ವ್ಯವಹಾರದ ಹೆಚ್ಚಿನ ಭಾಗವು ಬಂಡವಾಳ ಮಾರುಕಟ್ಟೆಗಳ ಮೂಲಕ ನಡೆಯುತ್ತಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅಧ್ಯಕ್ಷ ಅಜಯ್ ತ್ಯಾಗಿ ಪ್ರತಿಪಾದಿಸಿದ್ದಾರೆ. ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುವಲ್ಲಿ ಬಂಡವಾಳ ಮಾರುಕಟ್ಟೆಗಳು ದೊಡ್ಡ ಪಾತ್ರ ವಹಿಸಲಿವೆ ಎಂದೂ ಅವರು ಹೇಳಿದ್ದಾರೆ.
ಎಫ್‌ಐಸಿಸಿಐ ಆಯೋಜಿಸಿದ್ದ 18 ನೇ ವಾರ್ಷಿಕ ಕ್ಯಾಪಿಟಲ್ ಮಾರ್ಕೆಟ್ಸ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬಂಡವಾಳ ಮಾರುಕಟ್ಟೆಗಳ ಮೂಲಕ ಆರ್ಥಿಕತೆಯನ್ನು ವೇಗಗೊಳಿಸಬಹುದು. ನಮ್ಮ ಗಮನವು ಬಂಡವಾಳ ಮಾರುಟ್ಟೆಗಳನ್ನು ದೃಢಪಡಿಸುವುದಾಗಿದ್ದು, ಇದು ಆರ್ಥಿಕತೆಗೆ ಮಹತ್ತರವಾದ ಉತ್ತೇಜನ ನೀಡುತ್ತದೆ ಎಂದಿದ್ದಾರೆ.
ನಿಧಿ ಸಂಗ್ರಹಣೆ ಮತ್ತು ಬಹಿರಂಗಪಡಿಸುವಿಕೆಗಳ ಕುರಿತು ಮಾತನಾಡಿದ ತ್ಯಾಗಿ, ಹೊಸ ಯುಗದ ಟೆಕ್ ಕಂಪನಿಗಳ ಐಪಿಒಗಳು ಹೂಡಿಕೆದಾರರನ್ನು ಆಕರ್ಷಿಸುತ್ತದೆ. ದೊಡ್ಡ ಕಂಪನಿಗಳಿಗೆ ಐಪಿಒ ಮಾಡಲು ಸುಲಭವಾಗುವಂತೆ ಕನಿಷ್ಠ ಸಾರ್ವಜನಿಕ ಷೇರುದಾರರ ಚೌಕಟ್ಟನ್ನು ಪರಿಷ್ಕರಿಸಲಾಯಿತು. ಭವಿಷ್ಯದಲ್ಲಿ ಸಮತೋಲನ ನಿಧಿ ಸಂಗ್ರಹಣೆ ಮಾನದಂಡಗಳ ಪರಿಶೀಲನೆಯತ್ತ ಗಮನಹರಿಸಲಾಗುವುದು. ಭಾರತದಲ್ಲಿ ಎಸ್ಪಿಎಸಿ ಚೌಕಟ್ಟನ್ನು ಪರಿಚಯಿಸಬೇಕೇ? ಬೇಡವೇ ಎಂಬುದರ ಕುರಿತು ಸೆಬಿಯ ಪ್ರಾಥಮಿಕ ಮಾರುಕಟ್ಟೆ ಸಮಿತಿಯು ಚರ್ಚಿಸುತ್ತಿದೆ ಎಂದು ಹೇಳಿದರು.