ಹೊಸದಿಲ್ಲಿ:ಕೌಶಲ್ಯಾಭಿವೃದ್ಧಿ ಸಚಿವಾಲಯವು ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋದ 4,000 ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲಿದೆ. ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಿಬ್ಬಂದಿ ಸಾಮರ್ಥ್ಯ ಹೆಚ್ಚಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ಇಸ್ರೋದ ತಾಂತ್ರಿಕ ಸಿಬ್ಬಂದಿ ಕೌಶಲ್ಯ ಅಭಿವೃದ್ಧಿ ,ಸಾಮರ್ಥ್ಯ ವರ್ಧನೆಗಾಗಿ ತರಬೇತಿ ನೀಡಲು ಅಲ್ಪಾವಧಿಯ ಕೋರ್ಸ್ ರಚಿಸುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಹೇಳಲಾಗಿದೆ.
ಮುಂದಿನ 5 ವರ್ಷಗಳಲ್ಲಿ ಸುಮಾರು 4,000ಕ್ಕೂ ಹೆಚ್ಚು ಇಸ್ರೋದ ತಾಂತ್ರಿಕ ಸಿಬ್ಬಂದಿಗಳಿಗೆ ಈ ಕಾರ್ಯಕ್ರಮದ ಅಡಿ ವಿಶೇಷ ತರಬೇತಿ ನೀಡಲಾಗುವುದು ಮತ್ತು ಭಾರತದಾದ್ಯಂತ ಇರುವ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಗಳ (NSTI) ಮೂಲಕ ತರಬೇತಿ ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.
ಇಸ್ರೋ ಕೇಂದ್ರಗಳು ಮತ್ತು ಬಾಹ್ಯಾಕಾಶ ಇಲಾಖೆ (DoS) ಅಡಿ ಕಾರ್ಯನಿರ್ವಹಿಸುವ ವಿವಿಧ ತಾಂತ್ರಿಕ ಸಿಬ್ಬಂದಿಗಳ ಕೌಶಲ್ಯಗಳನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಚಿವಾಲಯದ ಮೂಲಕ ಸಿಬ್ಬಂದಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಇತ್ತೀಚಿನ ಉದ್ಯಮದ ಪ್ರವೃತ್ತಿಗಳಿಗೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ ಎಂದು ಹೇಳಲಾಗಿದೆ.