ಹೈದರಾಬಾದ್:ದೆಹಲಿ ಮದ್ಯ ನೀತಿ ಹಗರಣದಲ್ಲಿ ಸಿಲುಕಿರುವ ಆರೋಪ ಎದುರಿಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ರಾವ್ ಅವರ ಪುತ್ರಿ ಕೆ ಕವಿತಾ ಅವರು ಸಿಬಿಐ ವಿಚಾರಣೆ ಎದುರಿಸಲು ಕಾಲಾವಕಾಶ ಕೋರಿ ಪತ್ರ ಬರೆದಿದ್ದಾರೆ. ಡಿಸೆಂಬರ್ 6 ರಂದು ವಿಚಾರಣೆಗೆ ಬರಲು ಸಿಬಿಐ ನೋಟಿಸ್ ನೀಡಿತ್ತು. ಆ ದಿನದಂದು ಕವಿತಾ ಅವರು ವಿನಾಯ್ತಿ ಕೇಳಿದ್ದಾರೆ.
ಲಿಕ್ಕರ್ ಗೇಟ್ ಪ್ರಕರಣದಲ್ಲಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವೆ. ಪೂರ್ವಭಾವಿ ಕಾರ್ಯಕ್ರಮಗಳಿದ್ದು, ಡಿಸೆಂಬರ್ 6 ರಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ. ಡಿಸೆಂಬರ್ 11, 12 ಅಥವಾ 14, 15 ರಂದು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ವಿಚಾರಣೆ ನಡೆಸಬಹುದು ಎಂದು ಪತ್ರದಲ್ಲಿ ಬರೆದಿದ್ದಾರೆ.
ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಅವರು, ದೆಹಲಿ ಮದ್ಯ ಹಗರಣದಲ್ಲಿ ತಮ್ಮ ಪಾತ್ರವಿಲ್ಲ. ಪ್ರಕರಣದಲ್ಲಿ ತಮ್ಮ ಹೆಸರು ಕೂಡ ನಮೂದಿಸಲಾಗಿಲ್ಲ. ಈ ಬಗ್ಗೆ ದೃಢಪಡಿಸಬೇಕು ಎಂದೂ ಕೋರಿದ್ದಾರೆ. ಇದಕ್ಕೆ ಉತ್ತರ ನೀಡಿದ್ದ ಸಿಬಿಐ ಅಧಿಕಾರಿಗಳು, ಮದ್ಯ ಹಗರಣದಲ್ಲಿ ದಾಖಲಾದ ಎಫ್‌ಐಆರ್ ಮತ್ತು ದೂರಿನ ಪ್ರತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅದನ್ನು ಪರಿಶೀಲಿಸಿ ಎಂದು ತಿಳಿಸಿತ್ತು.
ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಇತರ 14 ಜನರ ವಿರುದ್ಧ ಮದ್ಯ ಮಾರಾಟದಲ್ಲಿ ಭಾರಿ ಹಗರಣ ನಡೆಸಿದ್ದ ಬಗ್ಗೆ ದೂರು ನೀಡಲಾಗಿದೆ. ಅದರಲ್ಲಿ ಕೆಸಿಆರ್ ಪುತ್ರಿಯ ಹೆಸರೂ ಇದೆ.
ಓದಿ:ದೆಹಲಿ ಮದ್ಯ ಹಗರಣ: ವಿಚಾರಣೆ ಎದುರಿಸಲು ಸಿದ್ಧ ಎಂದ ಟಿಆರ್‌ಎಸ್ ಎಂಎಲ್‌ಸಿ ಕವಿತಾ