ಚೆನ್ನೈ (ತಮಿಳುನಾಡು) :ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಬೃಹತ್ ಗಾತ್ರದ ಸಿಲಿಂಡರ್ ಮಾದರಿಯ ವಸ್ತುವೊಂದು ಪತ್ತೆಯಾಗಿದ್ದು, ಇದು ಪೋಲಾರ್ ಸ್ಯಾಟ್ಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ರಾಕೆಟ್‌ನ ಭಾಗವೇ ಎಂಬುದನ್ನು ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೋದ ಹಿರಿಯ ವಿಜ್ಞಾನಿಯೋರ್ವರು, “ನಾವು ಈ ಬೃಹತ್ ವಸ್ತುವನ್ನು ಖುದ್ದಾಗಿ ನೋಡದೆ ಅಥವಾ ಪರಿಶೀಲನೆ ಮಾಡದೇ ಇದರ ಬಗ್ಗೆ ಏನನ್ನೂ ಖಚಿತಪಡಿಸಲು ಅಥವಾ ನಿರಾಕರಿಸಲು ಸಾಧ್ಯವಿಲ್ಲ" ಎಂದರು. "ಮೊದಲು ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಈ ವಸ್ತುವಿನ ವಿಡಿಯೋವನ್ನು ನಮಗೆ ಕಳುಹಿಸಬೇಕು. ಅದರ ಮೇಲೆ ಯಾವುದಾದರೂ ಗುರುತುಗಳಿವೆಯೇ ಎಂಬುದನ್ನು ನಾವು ಪರಿಶೀಲಿಸಬೇಕು. ಇದಕ್ಕೂ ಮೊದಲು ಈ ವಸ್ತುವನ್ನು ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಬೇರೆಡೆಗೆ ಸ್ಥಳಾಂತರಿಸಬೇಕು. ಇನ್ನೂ ಅಗತ್ಯವಿದ್ದರೆ, ಅದು ಭಾರತೀಯ ರಾಕೆಟ್‌ಗೆ ಸಂಬಂಧಿಸಿದ ವಸ್ತುವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಸ್ರೋ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಬಹುದು" ಎಂದು ಅವರು ಹೇಳಿದರು.
ಸಮುದ್ರ ತೀರದಲ್ಲಿ ಪತ್ತೆಯಾಗಿರುವ ಈ ಬೃಹತ್ ಲೋಹೀಯ ವಸ್ತುವನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇದರಿಂದ ದೂರ ಇರುವಂತೆ ಅಲ್ಲಿನ ಪೊಲೀಸರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ. ಈ ವಸ್ತುವು ಬಹಳ ಹಿಂದಿನ ಭಾರತದ ಪಿಎಸ್‌ಎಲ್‌ವಿ ರಾಕೆಟ್‌ನ ಭಾಗವೇ ಎಂಬ ಬಗ್ಗೆ ಬಾಹ್ಯಾಕಾಶ ವಿಜ್ಞಾನಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ಬಾಹ್ಯಾಕಾಶ ವಿಜ್ಞಾನಿಗಳು ಈ ಕುರಿತು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.