ಪೂಂಚ್(ಜಮ್ಮು ಮತ್ತು ಕಾಶ್ಮೀರ):2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 300 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಪಕ್ಷದ ಹಿರಿಯ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಬುಧವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದು ಆದೇಶ ಹಿಂಪಡೆಯುವ ಕುರಿತಂತೆ ಪೂಂಚ್ ಜಿಲ್ಲೆಯ ರ‍್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮಾತ್ರ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬಹುದು ಅಥವಾ ಕಾಂಗ್ರೆಸ್ 300ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನದ 370ನೇ ವಿಧಿ ರದ್ದು ಹಿಂಪಡೆಯುತ್ತದೆ. ಆದರೆ ಅಂತಹ ಸ್ಥಿತಿ ಈಗ ನನಗೆ ಕಾಣಿಸುತ್ತಿಲ್ಲ ಎಂದರು.
ಆದರೂ ಕಾಂಗ್ರೆಸ್ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿ ಎಂದು ಪ್ರಾರ್ಥಿಸುವುದಾಗಿ ಗುಲಾಂ ನಬಿ ಆಜಾದ್ ಆಜಾದ್ ಹೇಳಿದ್ದು, 2024ರಲ್ಲಿ ಕಾಂಗ್ರೆಸ್ ಪಕ್ಷ 300 ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಭರವಸೆಯನ್ನು ನಾನು ನೀಡಲಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಸಾಮಾನ್ಯವಾಗಿ ಕೇಂದ್ರಾಡಳಿತ ಪ್ರದೇಶಗಳನ್ನು ರಾಜ್ಯಗಳನ್ನಾಗಿ ಮಾರ್ಪಾಡು ಮಾಡಲಾಗುತ್ತದೆ. ಆದರೆ ಒಂದು ರಾಜ್ಯವನ್ನು ವಿಭಜಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಇದು ಯಾವುದೇ ಬುದ್ಧಿವಂತ ವ್ಯಕ್ತಿ ಮಾಡುವ ಕೆಲಸವಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಮಹಿಳಾ ಪಿಎಂ ಸ್ವೀಕರಿಸಲು ನಾವು ಸಿದ್ಧ: ಮಮತಾ ಬ್ಯಾನರ್ಜಿ ಕಾರ್ಯಕ್ರಮದಲ್ಲಿ ನಟಿ ರಿಚಾ ಚಡ್ಡಾ ಹೇಳಿಕೆ!