ದಿನನಿತ್ಯದ ಉಪಹಾರದಲ್ಲಿ ಇಡ್ಲಿ ಕೂಡ ಒಂದು. ಸಾಮಾನ್ಯವಾಗಿ ಇಡ್ಲಿ ಪಾತ್ರೆಯಲ್ಲಿರುವ ಮೌಲ್ಡ್ನಲ್ಲಿ ದುಂಡಾದ ಇಡ್ಲಿ ತಯಾರಿಸುವುದು ವಾಡಿಕೆ. ಅಲ್ಲದೇ ತಟ್ಟೆ ಇಡ್ಲಿ, ಬಟನ್ ಇಡ್ಲಿ.. ಹೀಗೆ ಇಡ್ಲಿಗೆ ನಾನಾರೂಪ ನೀಡಲಾಯಿತು. ಆದರೆ ಬೆಂಗಳೂರಿನಲ್ಲಿ ಈಗ ಕ್ಯಾಂಡಿ ಇಡ್ಲಿಯ ಘಮ ಪಸರಿಸುತ್ತಿದೆ.
ಬೆಂಗಳೂರಿನ ಹೋಟೆಲ್ವೊಂದರಲ್ಲಿ ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ ತಯಾರಿಸಲಾಗಿದೆ. ಈ ಹೊಸ ಪ್ರಯೋಗ ಕೆಲವರ ಕೋಪಕ್ಕೂ ಗುರಿಯಾಗಿದೆ. ಟ್ವಿಟರ್ನಲ್ಲಿ ಈ ತಿಂಡಿಯ ಫೋಟೋ ಸಖತ್ ವೈರಲ್ ಆಗುತ್ತಿದೆ. ಐಸ್ ಕ್ರೀಂ ಕಡ್ಡಿಯಿಂದ ತಯಾರಿಸಿದ ಕ್ಯಾಂಡಿ ಇಡ್ಲಿಯ ಜತೆಗೆ ಚಟ್ನಿ ಮತ್ತು ಸಾಂಬಾರ್ ಕೂಡ ನೀಡಲಾಗಿದೆ.
ಈ ವಿಶೇಷ ಇಡ್ಲಿಯ ಫೋಟೋವನ್ನು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. 'ಬೆಂಗಳೂರು ಭಾರತದ ಇನೋವೇಶನ್ ಕ್ಯಾಪಿಟಲ್. ಹಲವು ಅನಿರೀಕ್ಷಿತ ವಲಯಗಳಲ್ಲಿ ಇದರ ಕ್ರಿಯೇಟಿವಿಟಿ ತಡೆಯಲು ಅಸಾಧ್ಯ. ಇಲ್ಲಿ ಐಸ್ ಕ್ರೀಂ ಕಡ್ಡಿಯ ಮೇಲೆ ಇಡ್ಲಿ ತಯಾರಾಗಿದೆ. ಇದನ್ನು ಸಾಂಬಾರ್ ಹಾಗೂ ಚಟ್ನಿಯಲ್ಲಿ ಅದ್ದಿಕೊಂಡು ತಿನ್ನುವುದು. ಯಾರು ಇದರ ಪರವಾಗಿದ್ದೀರಿ? ಯಾರು ಇದರ ವಿರುದ್ಧವಾಗಿದ್ದೀರಿ?' ಎಂದು ಆನಂದ್ ಮಹೀಂದ್ರಾ ಕೇಳಿದ್ದಾರೆ.
ಇದಕ್ಕೆ ಹಲವು ಜನ ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದನ್ನು ವಿರೋಧಿಸಿದ್ದಾರೆ. ಇದಕ್ಕೆ ಬಹಳಷ್ಟು ಜನ, ಸೂಪರ್ ಐಡಿಯಾ ಆದ್ರೆ ಮರದ ಕಡ್ಡಿಗಳು ಸುಮ್ಮನೆ ವೇಸ್ಟ್ ಎಂದಿದ್ದಾರೆ. ಇನ್ನೂ ಕೆಲವರು ಖಂಡಿತವಾಗಿಯೂ ನಮ್ಮ ಇಡ್ಲಿ ಸಂಸ್ಕೃತಿಯ ಮೇಲೆ ಆದ ಆಕ್ರಮಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.