ನವದೆಹಲಿ:ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ವಿಚಾರವಾಗಿ ಭಾರತದ ಜೊತೆ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತಂದುಕೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಕೇಂದ್ರ ಸರ್ಕಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದೆ. 'ಭಾರತ ವಿರೋಧಿ ಚಟುವಟಿಕೆಗಳಿಗೆ ಕೆನಡಾ ನಿರಂತರವಾಗಿ ಅವಕಾಶ ಮಾಡಿಕೊಡುತ್ತಿದೆ' ಎಂದು ಆರೋಪಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಗುರುವಾರ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾ ಮೂಗು ತೂರಿಸುತ್ತಿದೆ. ಇದು ಉಭಯ ದೇಶಗಳಿಗೆ ಒಳಿತಲ್ಲ. ರಾಜತಾಂತ್ರಿಕ ಸಂಬಂಧಗಳ ಕುರಿತಾದ ವಿಯೆನ್ನಾ ಒಪ್ಪಂದವನ್ನು ಕೆನಡಾ ಪಾಲಿಸುತ್ತದೆ ಎಂಬುದನ್ನು ಭಾರತ ನಿರೀಕ್ಷಿಸುತ್ತದೆ ಎಂದು ಹೇಳಿದರು.
ಇಡೀ ವಿಶ್ವವೇ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕಿದೆ. ಆದರೆ, ಕೆನಡಾ ಭಾರತ ವಿರೋಧಿ ಚಟುವಟಿಗಳಿಗೆ ನೆರವು ನೀಡುತ್ತಿದೆ. ಇದೇ ಸಮಸ್ಯೆಯ ಮೂಲವಾಗಿದೆ. ಇದರ ಪರಿಣಾಮವನ್ನು ಆ ದೇಶದಲ್ಲಿ ನಮ್ಮ ರಾಜತಾಂತ್ರಿಕ ಪ್ರತಿನಿಧಿಗಳು ಅನುಭವಿಸಿದ್ದಾರೆ. ಹೀಗಾಗಿ ಅಲ್ಲಿನ ಸರ್ಕಾರ ವಿಯೆನ್ನಾ ಒಪ್ಪಂದದಂತೆ ನಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಅಮೆರಿಕದಿಂದ ಒತ್ತಡ ಹಾಕುವ ತಂತ್ರ:ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ತನಿಖೆಯಲ್ಲಿ ಕೆನಡಾದೊಂದಿಗೆ ಸಹಕರಿಸುವಂತೆ ಭಾರತ ಸರ್ಕಾರಕ್ಕೆ ಸೂಚಿಸಬೇಕು ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅಮೆರಿಕದ ಮೊರೆ ಹೋಗಿದ್ದಾರೆ. ಹೀಗಾಗಿ ಅಲ್ಲಿನ ಮಾಧ್ಯಮಗಳು ಈ ಬಗ್ಗೆ ವರದಿ ಭಿತ್ತರಿಸುತ್ತಿವೆ. ಅಮೆರಿಕದಿಂದ ಹೊರ ಬರುತ್ತಿರುವ ಸುದ್ದಿಗಳು ಭಾರತವು ಸಮಸ್ಯೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಈಚೆಗೆ ಟ್ರುಡೊ ಉಲ್ಲೇಖಿಸಿದ್ದರು.