ನವದೆಹಲಿ:ಕೇಂದ್ರ ಜಲಶಕ್ತಿ ಸಚಿವಾಲಯ ಮೇಘಾಲಯದಲ್ಲಿನ ನಿರ್ಮಲವಾದ, ಶುದ್ಧ ನೀರಿನಿಂದ ಕೂಡಿದ ನದಿಯೊಂದರ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್ ಆಗಿದೆ.
ಈ ಸ್ವಚ್ಛ ಮತ್ತು ಸುಂದರವಾದ ನೀರು ಮೇಘಾಲಯದ ಉಮ್ಗೋಟ್ ನದಿಗೆ ಸೇರಿದ್ದು, ಈ ನದಿಯು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ವಿಶ್ವದ ಅತ್ಯಂತ ಸ್ವಚ್ಛ ನದಿಗಳಲ್ಲಿ ಇದೂ ಕೂಡ ಒಂದಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಅಲ್ಲದೇ, ನಮ್ಮ ದೇಶದ ಎಲ್ಲಾ ನದಿಗಳು ಇದರಂತೆ ಸ್ವಚ್ಛವಾಗಿರಲಿ ಎಂದು ಹಾರೈಸುತ್ತೇವೆ. ಮೇಘಾಲಯದ ಜನರಿಗೆ ಧನ್ಯವಾದ ಎಂದು ಟ್ವೀಟ್ ಮಾಡಿದೆ.
ಮೇಘಾಲಯದ ನದಿ ನೀರು ಸ್ವಚ್ಛ ಮತ್ತು ಪಾರದರ್ಶಕವಾಗಿದ್ದು, ನೀರಿನ ಆಳದಲ್ಲಿರುವ ಹಸಿರು ಮತ್ತು ಬಂಡೆಗಲ್ಲುಗಳು ಕೂಡ ಮೇಲಿನಿಂದ ಗೋಚರವಾಗುತ್ತಿದೆ. ಫೋಟೋದಲ್ಲಿ ಕಾಣುವಂತೆ ಸ್ವಚ್ಛ ನೀರಿನಲ್ಲಿ ದೋಣಿಯೊಂದು ಸಾಗುತ್ತಿದ್ದು, ಅದರಲ್ಲಿ ಜನರು ಕುಳಿತುಕೊಂಡಿದ್ದಾರೆ. ಇದನ್ನು ನೋಡಿದರೆ ದೋಣಿ ನೀರಿನಲ್ಲಿದೆಯೋ ಅಥವಾ ಗಾಳಿಯಲ್ಲಿ ತೇಲುತ್ತಿದೆಯೋ ಎಂದು ಭಾಸವಾಗುತ್ತದೆ.
ಜಲಶಕ್ತಿ ಸಚಿವಾಲಯ ಹಂಚಿಕೊಂಡ ಫೋಟೋ ಟ್ವೀಟ್ಗೆ 19 ಸಾವಿರಕ್ಕೂ ಹೆಚ್ಚು ಲೈಕ್, 3 ಸಾವಿರಕ್ಕೂ ಅಧಿಕ ರೀಟ್ವೀಟ್ ಕಂಡಿದೆ.