ಕಾನ್ಪುರ(ಉತ್ತರಪ್ರದೇಶ):ಕಾನ್ಪುರದ ಮೃಗಾಲಯದಲ್ಲಿ ಅಜಯ್ ಎಂಬ ಸಿಂಹದ 13ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಲಾಯ್ತು. ಕೇಕ್ ಕತ್ತರಿಸಿ, ಹಾಡಿ, ಕುಣಿದು ಎಲ್ಲರಿಗೂ ಸಿಹಿ ಹಂಚಿ ಈ ಲಯನ್ ಹುಟ್ಟುಹಬ್ಬವನ್ನು ಸಾರ್ವಜನಿಕರು ಆಚರಣೆ ಮಾಡಿದ್ರು.
ಸಿಂಹದೊಂದಿಗೆ ಹುಟ್ಟುಹಬ್ಬ ಆಚರಿಸಲು ಅವಕಾಶ ಕಾನ್ಪುರದ ಪ್ರಾಣಿ ಸಂಗ್ರಹಾಲಯದಲ್ಲಿ ಈ ರೀತಿ ಪ್ರಾಣಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಹೊಸ ಯೋಜನೆಯೊಂದನ್ನ ಜಾರಿಗೊಳಿಸಲಾಗಿದ್ದು, ಭಾನುವಾರದಂದು ಈ ಯೋಜನೆಗೆ ಚಾಲನೆ ನೀಡಲಾಯ್ತು.
ವನ್ಯಜೀವಿಗಳೊಂದಿಗೆ ಜನರ ಬಾಂಧವ್ಯ ಬೆಸೆಯುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ವನ್ಯಜೀವಿಗಳ ರಕ್ಷಣೆ ಹಾಗೂ ಅವುಗಳ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವುದು ಸಹ ಈ ಆಚರಣೆಯ ಮತ್ತೊಂದು ಉದ್ದೇಶ. ಇನ್ನು ಈ ರೀತಿ ಪ್ರಾಣಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳ ಬಯಸುವವರು ಆ ಪ್ರಾಣಿಯ ಒಂದು ವಾರದ ಆಹಾರದ ಖರ್ಚನ್ನು ನೋಡಿಕೊಳ್ಳುವುದು ಕಡ್ಡಾಯ.
13 ವರ್ಷದ ಬಬ್ಬರ್ ಶೇರ್ ಅಜಯ್ ಎಂಬ ಸಿಂಹದ ಹುಟ್ಟುಹಬ್ಬದ ಸ್ಮರಣೀಯ ಕ್ಷಣಕ್ಕೆ ಚಂದ್ರಶೇಖರ್ ಆಜಾದ್ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಕುಟುಂಬವು ಈ ಸಂಭ್ರಮಕ್ಕೆ ಸಾಕ್ಷಿಯಾಯಿತು. ಸಿಂಹದ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುವ ಮೂಲಕ ಜನರಿಗೆ ವನ್ಯಜೀವಿಗಳನ್ನು ಪ್ರೀತಿಸುವಂತೆ ಸಂದೇಶವನ್ನು ನೀಡಿದರು. ಪ್ರಾಣಿಶಾಸ್ತ್ರವನ್ನು ಹೆಚ್ಚಿನ ಜನರು ಅಧ್ಯಯನ ಮಾಡುವ ಮೂಲಕ ವನ್ಯಜೀವಿಗಳ ಬಗ್ಗೆ ಹೆಚ್ಚು ಸಂವೇದನಾಶೀಲರಾಗುವಂತೆ ಕರೆ ನೀಡಿದರು.