ಕೋಲ್ಕತ್ತಾ:ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರನ್ನು ಶಾಂತಿನಿಕೇತನದಲ್ಲಿರುವ ಅವರ ಭೂಮಿಯಿಂದ ಹೊರಹೋಗುವಂತೆ ವಿಶ್ವಭಾರತಿ ವಿಶ್ವವಿದ್ಯಾಲಯ ನೀಡಿದ್ದ ನೋಟಿಸ್ಗೆ ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಬಿಭಾಸ್ ರಂಜನ್ ಡಿ ಅವರಿದ್ದ ಪೀಠ ಗುರುವಾರ ಈ ಆದೇಶ ನೀಡಿದೆ. ಮೇ 15 ರಂದು ಕೆಳಹಂತದ ನ್ಯಾಯಾಲಯದಲ್ಲಿ ನಡೆಯಲಿರುವ ಈ ಕುರಿತ ವಿಚಾರಣೆಯ ಆದೇಶ ಬರುವರೆಗೆ ಆ ನೋಟಿಸ್ಗೆ ತಡೆ ನೀಡಲಾಗಿದೆ.
ಮೇ 6 ರೊಳಗೆ ಶಾಂತಿನಿಕೇತನದಲ್ಲಿರುವ ತಮ್ಮ ಪೂರ್ವಜರ ನಿವಾಸವಿರುವ 5,500 ಚದರ ಅಡಿ ಜಾಗವನ್ನು ತೆರವು ಮಾಡುವಂತೆ ವಿಶ್ವವಿದ್ಯಾನಿಲಯವು ಆದೇಶಿಸಿದ ನೀಡಿದ್ದ ನೋಟಿಸ್ ಪ್ರಶ್ನಿಸಿ, ಸೇನ್ ಪರಿಹಾರಕ್ಕಾಗಿ ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಸೇನ್ ಅವರು ಅಕ್ರಮವಾಗಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಕೇಂದ್ರೀಯ ವಿಶ್ವವಿದ್ಯಾಲಯವು ನೀಡಿದ ಗಡುವಿನೊಳಗೆ ಆ ಭೂಮಿಯಿಂದ ಸೇನ್ ತೆರವು ಮಾಡಲು ವಿಫಲವಾದರೆ ಅವರನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಗುವುದು ಎಂದು ನೊಟೀಸ್ನಲ್ಲಿ ಎಚ್ಚರಿಸಿದೆ. 1943ರ ಅಕ್ಟೋಬರ್ನಲ್ಲಿ ಅಂದಿನ ವಿಶ್ವಭಾರತಿ ಪ್ರಧಾನ ಕಾರ್ಯದರ್ಶಿ ರತೀಂದ್ರನಾಥ ಠಾಗೋರ್ ಅವರು ತಮ್ಮ ತಂದೆ ಅಶುತೋಷ್ ಸೇನ್ ಅವರಿಗೆ 1.38 ಎಕರೆ ಭೂಮಿಯನ್ನು 99 ವರ್ಷಗಳ ಗುತ್ತಿಗೆಗೆ ನೀಡಿದ್ದರು. ನಂತರ ಅವರು ಶಾಂತಿನಿಕೇತನದಲ್ಲಿ 'ಪ್ರತಿಚಿ' ಮನೆಯನ್ನು ನಿರ್ಮಿಸಿದ್ದರು ಎಂದು ಅರ್ಥಶಾಸ್ತ್ರಜ್ಞರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.