ಅಮರಾವತಿ: ವಿಳಂಬವಾಗಿರುವ ಸಚಿವ ಸಂಪುಟದ ಪುನರ್ ರಚನೆಯನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು. ಸಚಿವ ಸ್ಥಾನ ಕಳೆದುಕೊಳ್ಳುವವರಿಗೆ ಪಕ್ಷದ ಜವಾಬ್ದಾರಿಗಳನ್ನು ವಹಿಸಲಾಗುವುದು ಎಂದು ಆಂಧ್ರ ಸಿಎಂ ವೈ ಎಸ್ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಹಿತಿ ನೀಡಿದ ಜಗನ್, ಸಚಿವ ಸಂಪುಟ ಪುನರ್ ರಚನೆ ನಡೆಯುತ್ತಿದ್ದು, ಶೀಘ್ರದಲ್ಲೇ ಅಂತಿಮಗೊಳಿಸುವುದಾಗಿ ಶಾಸಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಎರಡೂವರೆ ವರ್ಷಗಳ ನಂತರ ಎಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿ ಹೊಸ ತಂಡವನ್ನು ರಚಿಸುವುದು ಆರಂಭಿಕ ಯೋಜನೆಯಾಗಿದ್ದರೂ, ಇವರಲ್ಲಿ ಕೆಲವರಿಗೆ ಮತ್ತೆ ಅವಕಾಶ ನೀಡಬಹುದು ಎಂದು ಜಗನ್ ಸುಳಿವು ನೀಡಿದ್ದಾರೆ. ಜಾತಿ ಸಮೀಕರಣವೂ ಮುಂದುವರಿದಿದ್ದು, ಯಾರಿಗೆ ಮಣೆ ಹಾಕಲಿದ್ದಾರೆ..? ಯಾರಿಗೆ ಕೊಕ್ ನೀಡ್ತಾರೆ ಅನ್ನೋದು ಭಾರಿ ಕುತೂಹಲ ಮೂಡಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಪುಟ ಪುನರ್ ರಚನೆ ಮಾಡಬೇಕಾಗಿತ್ತು. ಆದರೆ, ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಗಾಗಿ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಈಗ ರಾಜ್ಯದ ಜಿಲ್ಲೆಗಳನ್ನು ವಿಭಜಿಸಿ ದ್ವಿಗುಣಗೊಳಿಸಲಾಗುತ್ತಿದ್ದು, ಏಪ್ರಿಲ್ 2 ರ ನಂತರ ಸಚಿವ ಸಂಪುಟ ಪುನಾರಚನೆ ಮಾಡಲು ನಿರ್ಧರಿಸಿದ್ದೇನೆ. ಸಚಿವ ಸಂಪುಟದಿಂದ ತೆಗೆದುಹಾಕುವುದು ಎಂದರೆ ಅವರನ್ನು ಪಕ್ಕಕ್ಕೆ ತಳ್ಳುವುದು ಅಲ್ಲ ಎಂದು ಸಿಎಂ ಜಗನ್ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.