ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಪುನರ್ ರಚನೆಯಾಗಿದ್ದು, ಅನೇಕ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಪ್ರಮುಖವಾಗಿ ದಲಿತ ಹಾಗೂ ಹಿಂದುಳಿದ ವರ್ಗಗಳ ಸದಸ್ಯರನ್ನು ಕ್ಯಾಬಿನೆಟ್ನಲ್ಲಿ ಸೇರಿಸಿಕೊಳ್ಳಲಾಗಿದೆ. ಇದೇ ವಿಚಾರವಾಗಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ದಲಿತ, ಹಿಂದುಳಿದವರಿಗೆ ಸಚಿವ ಸ್ಥಾನ ನೀಡಲಾಗಿದೆ: ಮಲ್ಲಿಕಾರ್ಜುನ ಖರ್ಗೆ - ಕಾಂಗ್ರೆಸ್ ಪ್ರತಿಕ್ರಿಯೆ
43 ಸಂಸದರಿಗೆ ಮೋದಿ ಸಚಿವ ಸಂಪುಟದಲ್ಲಿ ಅವಕಾಶ ನೀಡಲಾಗಿದ್ದು, ಈ ವಿಚಾರವಾಗಿ ಮೊದಲ ಸಲ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಸಂಪುಟದಲ್ಲಿ ಹಲವು ದಲಿತ ಹಾಗೂ ಹಿಂದುಳಿದ ವರ್ಗಗಳ ಸದಸ್ಯರಿಗೆ ಸಚಿವಗಿರಿ ನೀಡಲಾಗಿದೆ. ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಹೀಗೆ ಮಾಡಲಾಗಿದೆ ಎಂದು ಹೇಳಿರುವ ಖರ್ಗೆ, ಸಮುದಾಯಗಳ ಒಳಿತಿಗಾಗಿ ಅವರು ಈ ನಿರ್ಧಾರ ಕೈಗೊಂಡಿಲ್ಲ. ಬದಲಿಗೆ ಜನರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂದು ಆರೋಪ ಮಾಡಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ವಕ್ತಾರ್ ಜೈವೀರ್ ಶೆರ್ಗಿಲ್, ಕೇಂದ್ರ ಕ್ಯಾಬಿನೆಟ್ ಪುನರ್ ರಚನೆಯಾಗಿರುವುದರಲ್ಲಿ ಯಾವುದೇ ಅರ್ಥವಿಲ್ಲ. ದೇಶದ ಆರ್ಥಿಕತೆ, ನಿರುದ್ಯೋಗ, ಆರೋಗ್ಯ ಹಾಗೂ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದಿದ್ದಾರೆ.