ನವದೆಹಲಿ :ಎರಡು ದಿನಗಳ ದೆಹಲಿ ಪ್ರವಾಸ ಕೈಗೊಂಡಿರುವ ಕರ್ನಾಟಕ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಸೇರಿ ಅನೇಕರನ್ನ ಭೇಟಿ ಮಾಡಿದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಸಚಿವ ಸಂಪುಟ ರಚನೆ ಸೇರಿದಂತೆ ಅನೇಕ ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಹಾಗೂ ಪ್ರವಾಹದಿಂದ ಜನರು ತೊಂದರೆಗೊಳಗಾಗಿದ್ದು, ಆದಷ್ಟು ಬೇಗ ಸಚಿವ ಸಂಪುಟ ರಚನೆ ಮಾಡಲಾಗುವುದು ಎಂದರು. ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷರ ಬಳಿ ಸಮಯಾವಕಾಶ ಕೇಳಿರುವೆ.
ಕ್ಯಾಬಿನೆಟ್ ಯಾವಾಗ ರಚನೆಯಾಗಬೇಕು ಎಂಬುದರ ಬಗ್ಗೆ ಇಂದು ರಾತ್ರಿ ನನಗೆ ಮಾಹಿತಿ ಸಿಗಲಿದ್ದು, ಬಹುಶಃ ಮತ್ತೊಮ್ಮೆ ದೆಹಲಿಗೆ ಬರುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿಸಿದರು. ಆದರೆ, ಈ ಸಲದ ಭೇಟಿಯಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅಭ್ಯರ್ಥಿಗಳ ಬಗ್ಗೆ ಯಾವುದೇ ರೀತಿಯ ಚರ್ಚೆ ನಡೆಸಿಲ್ಲ ಎಂದರು.
ಉತ್ತಮವಾದ ಸಚಿವ ಸಂಪುಟ ರಚನೆ
ಉತ್ತಮವಾದ ಸಚಿವ ಸಂಪುಟ ರಚನೆ ಮಾಡಲು ಮುಂದಾಗಿದ್ದು, ಅನುಭವಿ, ಹೊಸ ಚಿಂತನೆ ಹಾಗೂ ಕ್ರಿಯೆಟಿವಿಟಿ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು ಎಂದರು. ತಮ್ಮ ಸರ್ಕಾರ ರಬ್ಬರ್ ಸ್ಟ್ಯಾಂಪ್ ಆಗಿರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬೊಮ್ಮಾಯಿ, ಪ್ರಧಾನಿ ಮೋದಿ ಜೊತೆಗಿನ ಸಭೆಯಲ್ಲಿ ರಾಜ್ಯದಲ್ಲಿನ ವ್ಯಾಕ್ಸಿನೇಷನ್ ಕೊರತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ದೆಹಲಿಯಲ್ಲಿ ಕರ್ನಾಟಕದ ಕಮಿಷನರೇಟ್ ಮತ್ತಷ್ಟು ಆ್ಯಕ್ಟೀವ್ ಮಾಡಲು ಹೊಸ ತಂಡ ರಚನೆ ಮಾಡುವುದಾಗಿ ತಿಳಿಸಿದ ಅವರು, ಎಲ್ಲದಕ್ಕೂ ಲೆಕ್ಕ ಇಡುವಂತೆ ಹೇಳಲಾಗುವುದು ಎಂದರು.
ಜೆ.ಪಿ.ನಡ್ಡಾ ಭೇಟಿ ಮಾಡಿದ ಬೊಮ್ಮಾಯಿ ಸಿದ್ದರಾಮಯ್ಯಗೆ ಟಾಂಗ್
ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿರುವ ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ನಮ್ಮ ಸರ್ಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ ಎಂದರು. ಇದೇ ವೇಳೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಕೆಲ ಬಿಜೆಪಿ ಶಾಸಕರಿಗೆ ಕಿವಿಮಾತು ಹೇಳಿರುವ ಸಿಎಂ, ನಾಳೆ ನಾನು ರಾಜ್ಯಕ್ಕೆ ಹೋಗುತ್ತಿದ್ದೇನೆ. ನನ್ನೊಂದಿಗೆ ಬಂದು ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದರು.