ನವದೆಹಲಿ:ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಮತ್ತು ಬೆಲೆ ಏರಿಕೆಯಿಂದ ಅಪಾರ ನಷ್ಟಕ್ಕೀಡಾಗಿರುವ ಕೃಷಿ ಕ್ಷೇತ್ರದ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಹಿಂಗಾರು ಹಂಗಾಮಿನ ಬೆಳೆಗಳಿಗೆ ಬೇಕಾಗುವ ರಸಗೊಬ್ಬರಗಳ ಮೇಲೆ 22,303 ಕೋಟಿ ರೂಪಾಯಿ ಸಬ್ಸಿಡಿ ನೀಡಿದೆ. ರೈತರು ರಬಿ ಬೆಳೆಗಳಿಗೆ ಬೇಕಾಗುವ ಮತ್ತು ಮಣ್ಣಿನ ಪೋಷಕಾಂಶ ಹೆಚ್ಚಿಸುವ ಫಾಸ್ಫಾಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ಬುಧವಾರ ನಡೆಸ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ಕೇಂದ್ರ ಸರ್ಕಾರ ರಬಿ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕದಂತಹ ವಿವಿಧ ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರಕ್ಕೆ (ಎನ್ಬಿಎಸ್) ಅನುಮೋದಿಸಲಾಗಿದೆ ಎಂದರು. ಡಿ-ಅಮೋನಿಯಂ ಫಾಸ್ಫೇಟ್ ಪ್ರತಿ ಚೀಲ ಹಳೆಯ ದರವಾದ 1,350 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಮ್ಯೂರಿಯೇಟ್ ಆಫ್ ಪೊಟ್ಯಾಶ್ (ಎಂಒಪಿ) ದರದಲ್ಲಿ ಇಳಿಕೆಯಾಗಲಿದೆ. ಇದು ಮಣ್ಣಿನ ಪೋಷಕಾಂಶಕ್ಕೆ ಅಗತ್ಯವಾದ ರಸಗೊಬ್ಬರ ಎಂದು ಠಾಕೂರ್ ಹೇಳಿದರು.