ನವದೆಹಲಿ:ಕೇಂದ್ರ ಸರ್ಕಾರ 2023- 24ನೇ ಸಾಲಿನ ಮಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಿಸಿದೆ. ಜೋಳ, ರಾಗಿ, ಮೆಕ್ಕೆಜೋಳ, ಹೆಸರು, ತೊಗರಿ, ಭತ್ತ, ಸೂರ್ಯಕಾಂತಿ ಹಾಗೂ ಎಣ್ಣೆ ಕಾಳುಗಳ ಎಂಎಸ್ಪಿಯನ್ನು ಶೇ.6ರಿಂದ 7ರವರೆಗೆ ಹೆಚ್ಚಿಸಲಾಗಿದೆ. ಪ್ರತಿ ಭತ್ತದ ಬೆಲೆ ಕ್ವಿಂಟಲ್ಗೆ 143 ರೂ. ಏರಿಕೆ ಮಾಡಲಾಗಿದೆ. ಇದರಿಂದ ಕನಿಷ್ಠ ಬೆಲೆ ಕ್ವಿಂಟಲ್ಗೆ 2,183 ರೂ.ಗೆ ತಲುಪಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎಸ್) 2023- 24ನೇ ಎಲ್ಲ ಖಾರಿಫ್ ಬೆಳೆಗಳಿಗೆ ಎಂಎಸ್ಪಿ ಹೆಚ್ಚಳ ಸಂಬಂಧ ಅನುಮೋದನೆ ನೀಡಿತು. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್, "ಕೃಷಿಯಲ್ಲಿ ನಾವು ಸಿಎಸಿಪಿ (ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ) ಶಿಫಾರಸುಗಳನ್ನು ಆಧರಿಸಿ ಕಾಲಕಾಲಕ್ಕೆ ಎಂಎಸ್ಪಿ ನಿಗದಿಪಡಿಸುತ್ತಿದ್ದೇವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಖಾರಿಫ್ ಬೆಳೆಗಳ ಎಂಎಸ್ಪಿ ಜಾಸ್ತಿಯಾಗಿದೆ. ಚಿಲ್ಲರೆ ಹಣದುಬ್ಬರ ಕುಸಿತ ಪ್ರವೃತ್ತಿಯಲ್ಲಿರುವ ಈ ಸಂದರ್ಭದಲ್ಲಿ ಎಂಎಸ್ಪಿ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ" ಎಂದು ಹೇಳಿದರು.