ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸೆಪ್ಟೆಂಬರ್ 30 ರಂದು ಪಶ್ಚಿಮ ಬಂಗಾಳದ ಏಳು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ.
ಏಳು ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿರುವ ಭವಾನಿಪುರವೂ ಸೇರಿದೆ. ಈ ಕ್ಷೇತ್ರದಲ್ಲಿ ಅವರು ಗೆದ್ದಿಲ್ಲ ಅಂದರೆ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ. ಇದೇ ಕಾರಣಕ್ಕೆ ಇಷ್ಟು ದಿನಗಳ ವರೆಗೆ ಚುನಾವಣೆಗಳನ್ನು ಬೇಗನೆ ಮುಗಿಸುವಂತೆ ಟಿಎಂಸಿ ಹಾಗೂ ಕೋವಿಡ್ ಕಾರಣದಿಂದ ಎಲೆಕ್ಷನ್ ಮುಂದೂಡುವಂತೆ ಬಿಜೆಪಿ ಒತ್ತಾಯಿಸುತ್ತಾ ಬಂದಿತ್ತು. ಆದರೆ, ಈಗ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಕಣಕ್ಕೆ ಇಳಿದಿದ್ದ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಬಿಟ್ಟು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದರು. ಆದರೆ, ಅವರ ಪಕ್ಷಕ್ಕೆ ಬಹುಮತ ಬಂದ ಹಿನ್ನೆಲೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಮರಳಿದ್ದರು.