ನವದೆಹಲಿ: ಐದು ರಾಜ್ಯಗಳಲ್ಲಿ ಇತ್ತೀಚಿಗೆ ನಡೆದ ಮೂರು ಲೋಕಸಭಾ ಕ್ಷೇತ್ರಗಳು ಮತ್ತು ಏಳು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಒಟ್ಟು 10 ಕ್ಷೇತ್ರಗಳಲ್ಲಿ ಬಿಜೆಪಿ ಎರಡು ಲೋಕಸಭಾ ಮತ್ತು ಮೂರು ವಿಧಾನಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಉಳಿದಂತೆ ಮತ್ತೊಂದು ಲೋಕಸಭೆ ಸ್ಥಾನದಲ್ಲಿ ಶಿರೋಮಣಿ ಅಕಾಲಿ ದಳ, ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ತಲಾ ಒಂದು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಹಾಗೂ ವೈಆರ್ಎಸ್ ಕಾಂಗ್ರೆಸ್ ಜಯ ದಾಖಲಿಸಿದೆ.
ಉತ್ತರ ಪ್ರದೇಶದ ರಾಮ್ಪುರ್, ಅಜಂಗಢ ಲೋಕಸಭಾ ಕ್ಷೇತ್ರ, ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರ ಹಾಗೂ ತ್ರಿಪುರದ ನಾಲ್ಕು ವಿಧಾನಸಭಾ ಕ್ಷೇತ್ರ, ಆಂಧ್ರಪ್ರದೇಶದ ಆತ್ಮಕೂರ್, ದೆಹಲಿಯ ರಾಜೇಂದ್ರ ನಗರ ಮತ್ತು ಜಾರ್ಖಂಡ್‌ನ ಮಂದಾರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಜೂ.23ರಂದು ಮತದಾನ ನಡೆದಿತ್ತು. ಭಾನುವಾರ (ಜೂ.26) ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ.
ಹಿಗ್ಗಿದ ಬಿಜೆಪಿ, ಕುಗ್ಗಿದ ಎಸ್ಪಿ.. ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಎರಡೂ ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಹಿಗ್ಗಿದೆ. ಯಾಕೆಂದರೆ, ರಾಮ್ಪುರ್, ಅಜಂಗಢ ಲೋಕಸಭಾ ಕ್ಷೇತ್ರಗಳು ಸಮಾಜವಾದಿ ಪಕ್ಷದ ತೆಕ್ಕೆಯಲ್ಲಿದ್ದವು. ಆದರೆ, ಎರಡೂ ಕ್ಷೇತ್ರಗಳನ್ನು ಎಸ್ಪಿ ಕಳೆದುಕೊಂಡಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಅಜಂಗಢ ಕ್ಷೇತ್ರದಿಂದ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ರಾಮ್ಪುರ್ ಕ್ಷೇತ್ರದಿಂದ ಮತ್ತೊಬ್ಬ ಪ್ರಬಲ ನಾಯಕ ಅಜಂ ಖಾನ್ ಗೆದ್ದಿದ್ದರು. ಆದರೆ, ನಂತರ ಇಬ್ಬರೂ ನಾಯಕರು ಕಳೆದ ಮಾರ್ಚ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ನಂತರ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿದ್ದ ಎರಡೂ ಸ್ಥಾನಗಳಿಗೆ ಉಪ ಚುನಾವಣೆ ನಡೆದಿತ್ತು.
ಅಜಂಗಢ ಕ್ಷೇತ್ರದಿಂದ ಬಿಜೆಪಿಯ ದಿನೇಶ್ ಲಾಲ್ ಯಾದವ್ 8,679 ಮತಗಳ ಅಂತರದಿಂದ ಗೆದ್ದಿದ್ದಾರೆ. ಇಲ್ಲಿ ಎಸ್ಪಿ ಅಭ್ಯರ್ಥಿಯಾಗಿದ್ದ ಅಖಿಲೇಶ್ ಯಾದವ್ ಅವರ ಸೋದರ ಸಂಬಂಧಿ ಧರ್ಮೇಂದ್ರ ಯಾದವ್ ಸೋಲುಂಡಿದ್ದಾರೆ. ಅಲ್ಲದೇ, ಈ ಹಿಂದೆ ಧರ್ಮೇಂದ್ರ ಮೂರು ಬಾರಿ ಸಂಸದರಾಗಿದ್ದರು. ಇತ್ತ, ರಾಮ್ಪುರ್ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ 42 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಎಸ್ಪಿ ಅಭ್ಯರ್ಥಿ ಹಾಗೂ ಅಜಂ ಖಾನ್ ಆಪ್ತ ಮೊಹಮ್ಮದ್ ಅಸಿಮ್ ರಾಜಾ ಸೋತಿದ್ದಾರೆ.
ಪಂಜಾಬ್ ಸಿಎಂಗೆ ಮುಖಭಂಗ.. ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಮುಖಭಂಗವಾಗಿದೆ. ಇದೇ ಕ್ಷೇತ್ರದಿಂದ ಈ ಹಿಂದೆ ಭಗವಂತ್ ಮಾನ್ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಧುರಿ ಕ್ಷೇತ್ರದಿಂದ ಗೆದ್ದ ನಂತರ ಮಾನ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದ ಈ ಕ್ಷೇತ್ರ ತೆರವಾಗಿತ್ತು.