ನವದೆಹಲಿ: ದೆಹಲಿ ಸೇರಿದಂತೆ ಆರು ರಾಜ್ಯಗಳಲ್ಲಿ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಏಳು ವಿಧಾನಸಭಾ ಸ್ಥಾನಗಳಿಗೆ ಗುರುವಾರ (ಜೂನ್ 23 ರಂದು) ನಡೆದ ಉಪ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದ್ದು ಮತಎಣಿಕೆ ನಡೆಯುತ್ತಿದೆ. ಎಣಿಕೆ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ.
ಚುನಾವಣೆ ಎಲ್ಲೆಲ್ಲಿ?:
1. ತ್ರಿಪುರಾದ ಅಗರ್ತಲಾ, ಜುಬರಾಜನಗರ, ಸುರ್ಮಾ ಮತ್ತು ಟೌನ್ ಬರ್ಡೋವಾಲಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದೆ. ಟೌನ್ ಬರ್ಡೋ ವಾಲಿಯಿಂದ ಸ್ಪರ್ಧಿಸಿರುವ ರಾಜ್ಯಸಭಾ ಸಂಸದ ಮಾಣಿಕ್ ಸಹಾ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಚುನಾವಣೆಯನ್ನು ಗೆಲ್ಲಲೇಬೇಕಾಗಿದೆ.
2. ಉತ್ತರ ಪ್ರದೇಶದ ರಾಂಪುರ, ಅಜಂಗಢ್ ಮತ್ತು ಪಂಜಾಬ್‌ನ ಸಂಗ್ರೂರ್ ಕ್ಷೇತ್ರದಲ್ಲಿ ಲೋಕಸಭಾ ಉಪಚುನಾವಣೆ ನಡೆದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ವರ್ಷದ ಆರಂಭದಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಅಜಂಗಢ್ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಹಾಗೆಯೇ, ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೂ ವಿಧಾನಸಭೆಗೆ ಆಯ್ಕೆಯಾದಾಗ ರಾಂಪುರ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.
3. ರಾಂಪುರದಲ್ಲಿ ಬಿಜೆಪಿ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಘನಶ್ಯಾಮ್ ಸಿಂಗ್ ಲೋಧಿ ಅವರನ್ನು ಕಣಕ್ಕಿಳಿಸಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಸೀಂ ರಾಜಾ ಸ್ಪರ್ಧಿಸಿದ್ದಾರೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷವು ರಾಂಪುರದಿಂದ ಸ್ಪರ್ಧಿಸಲಿಲ್ಲ.