ನವದೆಹಲಿ :ನಾಲ್ಕು ರಾಜ್ಯಗಳಲ್ಲಿ ನಡೆದ ಒಂದು ಲೋಕಸಭಾ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಶನಿವಾರ ಹೊರ ಬಿದ್ದಿದೆ. ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಐದು ಕ್ಷೇತ್ರಗಳಲ್ಲೂ ಸೋಲುಂಡಿದೆ. ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ತಲಾ ಎರಡು ಕಡೆ ಹಾಗೂ ಆರ್ಜೆಡಿ ಒಂದು ಕಡೆ ಗೆಲುವು ದಾಖಲಿಸಿದೆ.
ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರ ಮತ್ತು ಬಾಲಿಗುಂಗೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಇಲ್ಲಿನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾದ ಖ್ಯಾತ ನಟ ಶತ್ರುಘ್ನ ಸಿನ್ಹಾ ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇತ್ತೀಚೆಗೆ ಟಿಎಂಸಿ ಸೇರಿರುವ ಶತ್ರುಘ್ನ ಸಿನ್ಹಾ 6,56,358 ಮತಗಳನ್ನು ಪಡೆದು ಜಯ ದಾಖಲಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಗ್ನಿಮಿತ್ರಾ ಪಾಲ್ 3,53,149 ಮತಗಳನ್ನು ಪಡೆದಿದ್ದಾರೆ. ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಟಿಎಂಸಿಗೆ ಇದು ಮೊದಲ ಗೆಲುವಾಗಿದೆ. ಇತ್ತ, ಬ್ಯಾಲಿಗುಂಜ್ ವಿಧಾನಸಭಾ ಕ್ಷೇತ್ರದಲ್ಲಿ ಟಿಸಿಎಂ ಅಭ್ಯರ್ಥಿ, ಗಾಯಕ ಬಾಬುಲ್ ಸುಪ್ರಿಯೋ ಗೆಲುವು ಸಾಧಿಸಿದ್ದಾರೆ.
20,228 ಮತಗಳ ಅಂತರದಿಂದ ಸುಪ್ರಿಯೋ ಅವರು ಸಿಪಿಐ(ಎಂ) ಅಭ್ಯರ್ಥಿ ಸೈರಾ ಶಾ ಹಲೀಮ್ ವಿರುದ್ಧ ಜಯ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿದು ಠೇವಣಿಯನ್ನು ಕಳೆದುಕೊಂಡಿದೆ. ಬಿಜೆಪಿಯ ಕೀಯಾ ಘೋಷ್ 13 ಸಾವಿರ ಮತಗಳನ್ನಷ್ಟೇ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಠೇವಣಿ ಕಳೆದುಕೊಂಡು ಹೀನಾಯ ಸ್ಥಿತಿಗೆ ತಲುಪಿದೆ.
ಎರಡು ಕೈಗೆ ಗೆಲುವು : ಮಹಾರಾಷ್ಟ್ರ ಮತ್ತು ಛತ್ತೀಸ್ಗಢ್ನಲ್ಲಿ ತಲಾ ಒಂದು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಮಹಾರಾಷ್ಟ್ರದ ಕೊಲ್ಲಾಪುರ ಉತ್ತರ ಮತ ಕ್ಷೇತ್ರದಲ್ಲಿ ಬಿಜೆಪಿಯ ಸತ್ಯಜೀತ್ ಕದಂ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಜಯಶ್ರೀ ಚಂದ್ರಕಾಂತ್ ಜಾಧವ್ 19 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದಾರೆ. ಛತ್ತೀಸ್ಗಢ್ನ ಕೈರಾಗಢ್ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯ ಸಾಧಿಸಿದೆ. ಕಾಂಗ್ರೆಸ್ನ ಅಭ್ಯರ್ಥಿ ಯಶೋಧ ನೀಲಾಂಬರ್ ವರ್ಮಾ ಅವರು ಬಿಜೆಪಿಯ ಕೋಮಲಾ ಜನಘೇಲಾ ವಿರುದ್ಧ 20 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದಾರೆ.
ಬಿಹಾರದಲ್ಲಿ ಆರ್ಜೆಡಿಗೆ ಜಯ : ಬಿಹಾರದ ಬೋಚಹಾನ್ ವಿಧಾನಸಭಾ ಕ್ಷೇತ್ರದಲ್ಲಿ ಆರ್ಜೆಡಿ ಅಭ್ಯರ್ಥಿ ಅಮರ್ ಕುಮಾರ್ ಪಾಸ್ವಾನ್ ಗೆದ್ದಿದ್ದಾರೆ. ಬಿಜೆಪಿಯ ಬೇಬಿ ಕುಮಾರಿ ವಿರುದ್ಧ 36 ಸಾವಿರಕ್ಕೂ ಹೆಚ್ಚು ಅಧಿಕ ಮತಗಳ ಅಂತರದಿಂದ ಆರ್ಜೆಡಿ ಅಭ್ಯರ್ಥಿ ಭರ್ಜರಿ ಗೆಲುವು ಕಂಡಿದ್ದಾರೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಅಧಿಕಾರದಲ್ಲೂ ಇದ್ದರೂ ಬಿಜೆಪಿ ಅಭ್ಯರ್ಥಿ ಮುಗ್ಗರಿಸಿದ್ದಾರೆ.
ಬಿಜೆಪಿಗೆ ಹಿನ್ನಡೆ : ಉಪ ಚುನಾವಣೆಗಳ ಫಲಿತಾಂಶದಲ್ಲಿ ಬಿಜೆಪಿ ಹಿನ್ನಡೆಯನ್ನು ಅನುಭವಿಸಿದೆ. ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಸತತ ಎರಡು ಬಾರಿ ಕೂಡ ಬಿಜೆಪಿಯೇ ಗೆಲುವು ಸಾಧಿಸಿತ್ತು. 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಗಾಯಕ ಬಾಬುಲ್ ಸುಪ್ರಿಯೋ ಗೆದ್ದು ಬಂದಿದ್ದರು. ನಂತರ ಮೋದಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಆದರೆ, ಕಳೆದ ಜುಲೈನಲ್ಲಿ ಸಂಪುಟ ವಿಸ್ತರಣೆ ವೇಳೆ ಬಾಬುಲ್ ಸುಪ್ರಿಯೋ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲಾಗಿತ್ತು. ನಂತರ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಟಿಎಂಸಿಗೆ ಸೇರ್ಪಡೆಯಾಗಿದ್ದರು.
ಬಾಬುಲ್ ಸುಪ್ರಿಯೋ ರಾಜೀನಾಮೆಯಿಂದ ತೆರವಾಗಿದ್ದ ಅಸನ್ಸೋಲ್ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಈ ಕ್ಷೇತ್ರದಲ್ಲಿ ಬಾಬುಲ್ ಸುಪ್ರಿಯೋ ಸ್ಪರ್ಧಿಸಿರಲಿಲ್ಲ. ಬದಲಿಗೆ ಟಿಎಂಸಿ ಅಭ್ಯರ್ಥಿಯಿಂದ ಖ್ಯಾತ ನಟ ಶತ್ರುಘ್ನ ಸಿನ್ಹಾ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಎರಡು ಬಾರಿ ಗೆದ್ದಿದ್ದ ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ.
ಇದನ್ನೂ ಓದಿ:ಹನುಮ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ.. ಪೊಲೀಸರಿಗೆ ಗಾಯ, ಬಿಗುವಿನ ವಾತಾವರಣ