ಮೊರ್ಬಿ(ಗುಜರಾತ್): ದೇಶದ ಗಮನ ಸೆಳೆದಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಆರು ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಕೂಡ ಪ್ರಕಟವಾಗಲಿದೆ.
ಬಿಜೆಪಿ ಗೆಲುವು:ತೂಗುಸೇತುವೆ ದುರಂತದಿಂದ ಸುದ್ದಿಯಾಗಿದ್ದ ಗುಜರಾತ್ ರಾಜ್ಯದ ಮೊರ್ಬಿ ಕ್ವೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯ ಗೆಲುವು ಸಾಧಿಸಿದ್ದಾರೆ.
ತೂಗು ಸೇತುವೆ ದುರಂತ: ಅಕ್ಟೋಬರ್ 29ರಂದು ಮೊರ್ಬಿಯಲ್ಲಿ ಶತಮಾನದಷ್ಟು ಹಳೆಯದಾದ ತೂಗು ಸೇತುವೆ ಮುರಿದು ಬಿದ್ದು, ನೂರಾರು ಜನರು ನೀರುಪಾಲಾದರು. ಈ ವೇಳೆ 60 ವರ್ಷದ ಕಾಂತಿಲಾಲ್ ಅಮೃತಿಯ ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಜೀವ ಉಳಿಸಲು ಮಾಜಿ ಶಾಸಕ ನದಿಗೆ ಹಾರಿದ್ದಾರೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಆ ವೇಳೆ ಅವರು ಹಲವು ಜನರನ್ನು ರಕ್ಷಿಸಿದ್ದರು.
ಸಂತ್ರಸ್ತರಿಗೆ ಸಹಾಯಹಸ್ತ:ಈ ಹಿಂದೆ ತಯಾರಿಸಲಾಗಿದ್ದ ಬಿಜೆಪಿಯ ಗುಜರಾತ್ ಅಭ್ಯರ್ಥಿಗಳ ಮೂಲ ಪಟ್ಟಿಯಲ್ಲಿ ಕಾಂತಿಲಾಲ್ ಅಮೃತಿಯ ಹೆಸರು ಇರಲಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಸೇತುವೆ ದುರಂತದ ವಳೆಯಲ್ಲಿ ನದಿಯಲ್ಲಿ ಮುಳುಗುತ್ತಿದ್ದವರ ಜೀವ ಉಳಿಲು ತಾವೇ ನದಿಗೆ ಧುಮುಕಿದ ಅವರ ಸಾಹಸದಿಂದಾಗಿ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಮೊರ್ಬಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅಪಘಾತದ ಸಂದರ್ಭದಲ್ಲಿ ತೋರಿದ ಧೈರ್ಯಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಅಂದಿನ ದುರಂತದಲ್ಲಿ 135 ಮಂದಿ ಸಾವನ್ನಪ್ಪಿದ್ದು, 177 ಮಂದಿಯನ್ನು ರಕ್ಷಿಸಲಾಗಿದೆ. ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚಾಗಿತ್ತು.