ಬಗಾಹಾ, ಬಿಹಾರ: ಬಿಹಾರದಲ್ಲಿ ಹಾವಿನ ಮುಖದ ರೂಪವಿರುವ ಚಿಟ್ಟೆಯೊಂದು ಕಾಣಿಸಿಕೊಂಡು ಕೌತುಕ ಮೂಡಿಸಿದೆ. ರಾತ್ರಿ ವೇಳೆ ಬಲ್ಬ್ ಬೆಳಕಿಗೆ ಬಂದ ಚಿಟ್ಟೆ ಕಂಡು ಜನರು ಕೆಲಕಾಲ ಆಶ್ಚರ್ಯಚಕಿತರಾಗಿ ಇದು ಹಾವಿರಬಹುದೇ ಎಂದು ಅನುಮಾನದಿಂದ ನೋಡಿದ್ದಾರೆ. ಬಳಿಕ ಚಿಟ್ಟೆ ಎಂದು ಗೊತ್ತಾಗಿ, ಈ ವಿಚಿತ್ರ ಚಿಟ್ಟೆಯನ್ನು ವನದೇವಿಯ ಅವತಾರ ಎಂದು ಪರಿಗಣಿಸಿ ತುಪ್ಪದ ದೀಪ ಹಚ್ಚಿ ಪೂಜಿಸಿದ್ದಾರೆ.
ಚಂಪಾರಣ್ಯ ಅರಣ್ಯಪ್ರದೇಶದ ಅಂಚಿನಲ್ಲಿರುವ ಬಗಾಹಾದಲ್ಲಿ ಇಂತಹ ಅಪರೂಪದ ಜಾತಿಯ ಕೀಟಗಳು ಕಂಡುಬರುತ್ತವೆ. ಹಾವಿನಂತೆ ಕಂಡುಬಂದ ಈ ಚಿಟ್ಟೆಯನ್ನು ಅಟ್ಲಾಸ್ ಎಂದು ಕರೆಯಲಾಗುತ್ತದೆ. ಇದು ಪತಂಗಳಲ್ಲಿಯೇ ದೊಡ್ಡ ದೇಹ ಹೊಂದಿದೆ. ಈ ಚಿಟ್ಟೆ ತನ್ನ ಜೀವಕ್ಕೆ ಬೆದರಿಕೆ ಬಂದಾಗ, ಪರಭಕ್ಷಕಗಳನ್ನು ಹೆದರಿಸಲು ಹಾವಿನ ತಲೆಯಂತೆ ಕಾಣುವ ತನ್ನ ರೆಕ್ಕೆಗಳನ್ನು ಬಡಿಯುತ್ತದೆ.
ಈ ದೊಡ್ಡ ಆಕಾರದ ಅಪರೂಪದ ಚಿಟ್ಟೆ ಹಗಲಿನಲ್ಲಿ ವಿರಳವಾಗಿ ಕಂಡುಬರುತ್ತದೆ. ಇದು ರಾತ್ರಿ ವೇಳೆಯಲ್ಲಿ ಸಂಚರಿಸುವ ಕೀಟವಾಗಿದೆ. ಅತಿಯಾದ ಬೆಳಕಿಗೆ ಇದು ಆಕರ್ಷಿತವಾಗಿ ಒಂದೆಡೆ ಕುಳಿತುಕೊಳ್ಳುತ್ತದೆ. ಅಲ್ಲದೇ, ಇದು ಹಲವು ದಿನಗಳವರೆಗೆ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡುತ್ತದೆ.