ನವದೆಹಲಿ :ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್ ವಿರುದ್ಧ ಬಿಜೆಪಿ ಶುಕ್ರವಾರ ನೇರ ವಾಗ್ದಾಳಿ ನಡೆಸಿದೆ. ಜಾರ್ಜ್ ಸೊರೊಸ್ ಪ್ರಧಾನಿ ನರೇಂದ್ರ ಮೋದಿಯವರನ್ನು ಮಾತ್ರವಲ್ಲದೆ ಇಡೀ ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದು ವಾಸ್ತವದಲ್ಲಿ ಭಾರತದ ವಿರುದ್ಧದ ದಾಳಿಯಾಗಿದೆ. ಭಾರತ ಮತ್ತು ಯುದ್ಧದ ಮಧ್ಯೆ ಮೋದಿಯವರನ್ನು ಎಳೆದು ತರಲಾಗುತ್ತಿದೆ ಎಂದು ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಸೊರೊಸ್ ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಬಯಸುತ್ತಿದ್ದಾರೆ ಮತ್ತು ಅವರು ತಮಗೆ ಬೇಕಾದ ಕೆಲವೇ ವ್ಯಕ್ತಿಗಳು ಬಾರತದಲ್ಲಿ ಸರ್ಕಾರ ನಡೆಸುವುದನ್ನು ನೋಡಲು ಬಯಸುತ್ತಾರೆ. ಆದರೆ ನಾವು ಈ ಹಿಂದೆ ವಿದೇಶಿ ಶಕ್ತಿಗಳನ್ನು ಸೋಲಿಸಿದ್ದೇವೆ ಮತ್ತು ಮುಂದೆಯೂ ಅವರನ್ನು ಸೋಲಿಸುತ್ತೇವೆ ಎಂದು ಸ್ಮೃತಿ ಇರಾನಿ ಸೊರೊಸ್ಗೆ ತಿರುಗೇಟು ನೀಡಿದರು.
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಗುರಿಯಾಗಿದೆ ಮತ್ತು ಮೋದಿ ತಮ್ಮ ದಾಳಿಯ ಕೇಂದ್ರಬಿಂದು ಎಂದು ಸೊರೊಸ್ ಘೋಷಿಸಿದ್ದರು. ಅವರು ದೇಶದಲ್ಲಿ ತಮ್ಮ ಹಿತಾಸಕ್ತಿ ರಕ್ಷಿಸುವ ಸರ್ಕಾರವನ್ನು ಬಯಸುತ್ತಾರೆಯೇ ಹೊರತು ಭಾರತದ ಹಿತಾಸಕ್ತಿ ರಕ್ಷಿಸುವ ಸರ್ಕಾರವನ್ನಲ್ಲ ಎಂದು ಇರಾನಿ ಹೇಳಿದರು. ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆಯುತ್ತಿರುವ ಸಮಯದಲ್ಲಿ ಮತ್ತು ಭಾರತವು ಯುಎಸ್, ಫ್ರಾನ್ಸ್ ಮತ್ತು ಇಂಗ್ಲೆಂಡಿನ ಪ್ರಧಾನಿಯಂಥ ಜಾಗತಿಕ ನಾಯಕರಿಂದ ಶ್ಲಾಘನೆ ಪಡೆಯುತ್ತಿರುವ ಸಮಯದಲ್ಲಿ ನಮ್ಮ ಪ್ರಜಾಪ್ರಭುತ್ವವನ್ನು ಕೆಟ್ಟದಾಗಿ ಚಿತ್ರಿಸಲು ಬಯಸುವ ಉದ್ಯಮಿಗಳ ಸಾಮ್ರಾಜ್ಯಶಾಹಿ ಉದ್ದೇಶಗಳು ಬೆಳಕಿಗೆ ಬರುತ್ತಿವೆ ಎಂದು ಇರಾನಿ ಹೇಳಿದರು.