ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ವಿರುದ್ಧ ಒಂದರ ಮೇಲೊಂದು ಆರೋಪಗಳು ಕೇಳಿ ಬರುತ್ತಲೇ ಇದೆ. ಇದೀಗ ಈ ದಂಪತಿ 1.51 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಮುಂಬೈ ಮೂಲದ ಉದ್ಯಮಿಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.
ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ (Bandra Police station) ಶನಿವಾರ ನಿತಿನ್ ಬಾರೈ ಎಂಬ ಉದ್ಯಮಿಯು ಶಿಲ್ಪಾ-ಕುಂದ್ರಾ ದಂಪತಿ ಹಾಗೂ ಇತರರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
ರಾಜ್ ಕುಂದ್ರಾ - ಶಿಲ್ಪಾ ಶೆಟ್ಟಿ ಇದನ್ನೂ ಓದಿ: ಅಶ್ಲೀಲ ವಿಡಿಯೋ ಚಿತ್ರೀಕರಣ ಕೇಸ್: ಜೈಲಿನಿಂದ ಉದ್ಯಮಿ ರಾಜ್ಕುಂದ್ರಾ ರಿಲೀಸ್
2014ರ ಜುಲೈನಲ್ಲಿ ಎಸ್‌ಎಫ್‌ಎಲ್ ಫಿಟ್‌ನೆಸ್ ಕಂಪನಿಯ (SFL Fitness Company) ನಿರ್ದೇಶಕ ಕಾಶಿಫ್ ಖಾನ್, ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಮತ್ತು ಇತರರು ನನಗೆ ಪುಣೆ ಸುತ್ತಮುತ್ತ ಎರಡು ಸ್ಥಳಗಳಲ್ಲಿ ಜಿಮ್ ಮತ್ತು ಸ್ಪಾ(ಮಸಾಜ್) ಸೆಂಟರ್ ತೆರೆದು ಲಾಭ ಗಳಿಸಬಹುದೆಂದು ನಂಬಿಸಿ ನನಗೆ 1.51 ಕೋಟಿ ರೂ. ಹಣ ಹೂಡಿಕೆ ಮಾಡುವಂತೆ ಕೇಳಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಹಣ ಪಡೆದು ನನಗೆ ಮೋಸ ಮಾಡಿದ್ದಾರೆ. ಹಣವನ್ನು ಮರಳಿ ಕೇಳಿದಾಗ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ದೂರುದಾರ ನಿತಿನ್ ಬಾರೈ ಉಲ್ಲೇಖಿಸಿದ್ದಾರೆ.
ದೂರಿನ ಆಧಾರದ ಮೇಲೆ, ಬಾಂದ್ರಾ ಪೊಲೀಸರು 420 (ವಂಚನೆ), 120-ಬಿ (ಕ್ರಿಮಿನಲ್ ಪಿತೂರಿ), 506 (ಬೆದರಿಕೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಯಿಂದ ಮಾನಸಿಕ ಕಿರುಕುಳ... 75 ಕೋಟಿ ರೂ. ಪರಿಹಾರ ಕೇಳಿದ ಶೆರ್ಲಿನ್
ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಡಿ ಜೈಲು ಸೇರಿದ್ದ ರಾಜ್ ಕುಂದ್ರಾ ಸೆ.21ರಂದು ಜಾಮೀನಿನ ಮೇಲೆ ಹೊರಬಂದಿದ್ದರು. ಅಷ್ಟೇ ಅಲ್ಲ, ಶಿಲ್ಪಾ-ಕುಂದ್ರಾ ದಂಪತಿ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಲೈಂಗಿಕ ದೌರ್ಜನ್ಯ ಆರೋಪ ಮಾಡಿ, ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸಿದ್ದರು.