ಕರ್ನಾಟಕ

karnataka

ETV Bharat / bharat

ತಿರುವಿನಲ್ಲಿ ಡಿಕ್ಕಿಯಾಗಿ ಬಸ್​ ಮೇಲೆ ಉರುಳಿಬಿದ್ದ ಟ್ರಕ್​​: 7 ಮಂದಿ ದಾರುಣ ಸಾವು - ಅಯೋಧ್ಯೆಯಲ್ಲಿ ಬಸ್​​ ಟ್ರಕ್​ ಡಿಕ್ಕಿ

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಖಾಸಗಿ ಬಸ್​ ಮತ್ತು ಟ್ರಕ್​ ಮಧ್ಯೆ ಡಿಕ್ಕಿ ಸಂಭವಿಸಿ 7 ಮಂದಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಬಸ್​ ಮೇಲೆ ಉರುಳಿಬಿದ್ದ ಟ್ರಕ್
ಬಸ್​ ಮೇಲೆ ಉರುಳಿಬಿದ್ದ ಟ್ರಕ್

By

Published : Apr 22, 2023, 9:10 AM IST

ಅಯೋಧ್ಯೆ (ಉತ್ತರ ಪ್ರದೇಶ):ಅಯೋಧ್ಯೆಯಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಖಾಸಗಿ ಬಸ್​ ಮತ್ತು ಟ್ರಕ್​ ಮಧ್ಯೆ ಡಿಕ್ಕಿಯಾಗಿ 7 ಮಂದಿ ಸಾವನ್ನಪ್ಪಿದ್ದರೆ, 40ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಲಕ್ನೋ ಗೋರಖ್‌ಪುರ ಹೆದ್ದಾರಿಯ ಅಯೋಧ್ಯಾ ಕೊತ್ವಾಲಿ ಪ್ರದೇಶದಲ್ಲಿ ಶುಕ್ರವಾರ ಈ ದುರ್ಘಟನೆ ಸಂಭವಿಸಿದೆ.

ಅಯೋಧ್ಯೆಯಿಂದ ಬರುತ್ತಿದ್ದ ಖಾಸಗಿ ಬಸ್ ಅಂಬೇಡ್ಕರ್‌ನಗರ ಕಡೆಗೆ ತೆರಳಲು ಹೆದ್ದಾರಿಯಲ್ಲಿ ತಿರುವು ತೆಗೆದುಕೊಳ್ಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ ಮೇಲೆ ಟ್ರಕ್​​ ಉರುಳಿಕೊಂಡು ಬಿದ್ದಿದೆ. ಬಸ್​ನಲ್ಲಿದ್ದ ಜನರ ಪೈಕಿ 7 ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ. ಘಟನೆಯ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ, ಬಸ್​ನಲ್ಲಿ ಸಿಲುಕಿದ್ದವರ ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಭೀಕರ ದುರಂತ:ಖಾಸಗಿ ಬಸ್​ ತಿರುವಿನಲ್ಲಿ ಟರ್ನ್​ ತೆಗೆದುಕೊಳ್ಳುತ್ತಿದ್ದಾಗ ಅಚಾನಕ್ಕಾಗಿ ಎದುರಿಗೆ ಬಂದ ಟ್ರಕ್​ ಗುದ್ದಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಎರಡು ವಾಹನಗಳ ನಡುವಿನ ಡಿಕ್ಕಿ ಬಳಿಕ ಬಸ್​ ಮೇಲೆ ಟ್ರಕ್ ಉರುಳಿಬಿದ್ದಿದೆ. ಇದರಿಂದ 50 ಕ್ಕೂ ಹೆಚ್ಚಿದ್ದ ಪ್ರಯಾಣಿಕರು ಟ್ರಕ್​ನ ಅಡಿಯಲ್ಲಿ ಸಿಲುಕಿದ್ದರು. ಇದರಿಂದಾಗಿ ಸಾವು ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಅಯೋಧ್ಯೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಜಯ್ ರಾಜಾ ಪ್ರಕಾರ, ಅಪಘಾತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ಬಸ್​ ಮತ್ತು ಟ್ರಕ್​ ಅಡಿ ಸಿಲುಕಿದ್ದವರ ರಕ್ಷಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಉಪಚರಿಸಲು ಹತ್ತಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಅಪಘಾತಕ್ಕೀಡಾದ ವಾಹನದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ತಿಳಿಸಿದ್ದಾರೆ.

ಸಿಎಂ ಯೋಗಿ ಸಂತಾಪ:ಇನ್ನೂ, ದುರಂತದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅಗಲಿದ ಆತ್ಮಗಳಿಗೆ ಶಾಂತಿ ಸಿಗಲಿ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಪರಿಹಾರ ಕಾರ್ಯವನ್ನು ಚುರುಕುಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಜೊತೆಗೆ ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿ, ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.

ಉತ್ತರಾಖಂಡದ ಅಪಘಾತ:ಇತ್ತೀಚೆಗಷ್ಟೇ ಉತ್ತರಾಖಂಡದಲ್ಲಿ ಭೀಕರ ಬಸ್​ ದುರಂತ ಸಂಭವಿಸಿತ್ತು. 34 ಜನರ ಹೊತ್ತೊಯ್ಯುತ್ತಿದ್ದ ಬಸ್​ ಆಳ ಕಂದಕಕ್ಕೆ ಉರುಳಿ ಬಿದ್ದು ಚಾಲಕ ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿತ್ತು. ದುರಂತದಲ್ಲಿ ಹಲವರು ಗಾಯಗೊಂಡಿದ್ದರು. ಮಸ್ಸೂರಿ ಮತ್ತು ಡೆಹ್ರಾಡೂನ್​ ಮಾರ್ಗದಲ್ಲಿ ಈ ರಸ್ತೆ ಅಪಘಾತ ನಡೆದಿತ್ತು. ಘಟನೆ ವಿಷಯ ತಿಳಿದ ಇಂಡೋ ಟಿಬೆಟ್​ ಬಾರ್ಡರ್​ ಪೊಲೀಸ್​(ಐಟಿಬಿಪಿ) ಸ್ಥಳಕ್ಕಾಗಮಿಸಿ, ಎಲ್ಲ ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ಇದರಲ್ಲಿ ಮೂವರು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಓದಿ:ಮೀಸಲಾತಿ ಪ್ರತಿಭಟನೆಯಲ್ಲಿ ಹಿಂಸಾಚಾರ: ಪೊಲೀಸರಿಂದ ಅಶ್ರುವಾಯು ಪ್ರಯೋಗ

ABOUT THE AUTHOR

...view details