ಹೈದರಾಬಾದ್:ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್, ಬುರ್ಖಾ ಧರಿಸುವ ವಿಚಾರ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿತ್ತು. ಅದು ಇದೀಗ ತೆಲಂಗಾಣಕ್ಕೂ ಕಾಲಿಟ್ಟಿದೆ. ಹೈದರಾಬಾದ್‌ನ ಸಂತೋಷ್ ನಗರದಲ್ಲಿರುವ ಕೆವಿ ರಂಗಾರೆಡ್ಡಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಬುರ್ಖಾ ತೆಗೆದಿರಿಸಿ ಪರೀಕ್ಷೆ ಬರೆಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಆರೋಪ ಮಾಡಿದ್ದು, ಇದನ್ನು ಗೃಹ ಸಚಿವ ಮಹಮೂದ್ ಅಲಿ ಟೀಕಿಸಿದ್ದಾರೆ. ನಮ್ಮದು ಸಂಪೂರ್ಣ ಜಾತ್ಯತೀತ ನೀತಿಯ ಸರ್ಕಾರವಾಗಿದೆ. ಯಾವುದೇ ಉಡುಗೆ ಹಾಕಿಕೊಂಡು ಬಂದರೂ ತಪ್ಪಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿನಿಯರ ಆರೋಪವೇನು?:ಹೈದರಾಬಾದ್‌ನ ಸಂತೋಷ್ ನಗರದಲ್ಲಿರುವ ಕೆವಿ ರಂಗಾರೆಡ್ಡಿ ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿದ್ದು, ಈ ವೇಳೆ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಡ್ರೆಸ್ ಕೋಡ್ ಪಾಲಿಸಲು ಸೂಚಿಸಲಾಗಿದೆ. ಇದಕ್ಕೆ ಕೆಲ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ನಿಯಮದಂತೆ ನಡೆದುಕೊಳ್ಳಲು ವಿದ್ಯಾರ್ಥಿನಿಯರಿಗೆ ತಿಳಿ ಹೇಳಲಾಗಿದೆ. ಇದು ಮಕ್ಕಳು ಮತ್ತು ಕಾಲೇಜು ಸಿಬ್ಬಂದಿ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.
ಕಾಲೇಜಿನಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಮೊದಲ ದಿನದ ಪರೀಕ್ಷೆಯಲ್ಲಿ ಬುರ್ಖಾಗೆ ಆಕ್ಷೇಪವಿರಲಿಲ್ಲ. ಎರಡನೇ ಪರೀಕ್ಷೆ ವೇಳೆ ಬುರ್ಖಾ ತೆಗೆಯುವಂತೆ ಶಿಕ್ಷಕರು ಸೂಚಿಸಿದರು. ಇದನ್ನು ವಿರೋಧಿಸಿದಾಗ ಶಿಕ್ಷಕರು ಪರೀಕ್ಷೆಗೆ ಅವಕಾಶ ನೀಡಲಾಗಲ್ಲ ಎಂದರು. ಹೀಗಾಗಿ ಬುರ್ಖಾ ತೆಗೆಯಲಾಯಿತು. ನಗರದ ಕಾಲೆಜುಗಳಲ್ಲಿ ಈ ನಿಯಮವಿಲ್ಲ. ಇಲ್ಲಿ ಮಾತ್ರ ಯಾಕೆ ಎಂದು ಪರೀಕ್ಷೆಯ ಬಳಿಕ ವಿದ್ಯಾರ್ಥಿನಿಯರು ಮಾಧ್ಯಮಗಳೆದುರು ಆರೋಪಿಸಿದರು.
ಯಾವ ಬಟ್ಟೆ ಬೇಕಾದ್ರೂ ಹಾಕಲಿ:ಇನ್ನೂ, ಇದೇ ವಿಷಯವಾಗಿ ಮಾತನಾಡಿರುವ ಗೃಹ ಸಚಿವ ಮಹಮೂದ್ ಅಲಿ, ಶಿಕ್ಷಣ ಸಂಸ್ಥೆಯ ವಿರುದ್ಧ ಗರಂ ಆಗಿದ್ದಾರೆ. ಕಾಲೇಜಿನ ಕೆಲ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ಇದನ್ನು ಮಾಡುತ್ತಿರಬಹುದು. ಆದರೆ, ಸರ್ಕಾರದ ನೀತಿ ಸಂಪೂರ್ಣವಾಗಿ ಜಾತ್ಯತೀತವಾಗಿದೆ. ಮಕ್ಕಳು ತಮಗೆ ಬೇಕಾದುದನ್ನು ಧರಿಸಬಹುದು. ಆದರೆ, ಕಾಲೇಜಿಗೆ ವಿದೇಶಗಳಲ್ಲಿ ಧರಿಸುವಂತೆ ತುಂಡುಡುಗೆಯಲ್ಲಿ ಬಂದರೆ ಅದು ಆಕ್ಷೇಪಾರ್ಹ. ಒಳ್ಳೆಯ, ಮೈತುಂಬಾ ಬಟ್ಟೆ ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಯಾವುದೇ ಶಾಲಾ, ಕಾಲೇಜು, ಸ್ಥಳಗಳಲ್ಲಿ ಬುರ್ಖಾ ಧರಿಸುವಂತಿಲ್ಲ ಎಂದು ಎಲ್ಲಿಯೂ ಬರೆದಿಲ್ಲ. ನಾವು ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಮಕ್ಕಳು ಅವರಿಷ್ಟದಂತೆ ದಿರಿಸು ಧರಿಸಿ ಬರಬಹುದು ಎಂದು ತೆಲಂಗಾಣ ಗೃಹ ಸಚಿವ ಮಹಮೂದ್ ಅಲಿ ಹೇಳಿದರು.
ಹಿಜಾಬ್ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು:ಹಿಜಾಬ್ ಧಾರಣೆ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸಮವಸ್ತ್ರ ಕುರಿತು ಸರ್ಕಾರ ಏನು ಆದೇಶ ನೀಡಿತ್ತೋ ಅದು ಸರಿಯಾಗಿದೆ. ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಅದರ ಪ್ರಕಾರ ಪಾಲನೆ ಮಾಡಬೇಕು. ಸರ್ಕಾರ ಶಾಲಾ, ಕಾಲೇಜುಗಳಿಗೆ ಏನು ವಸ್ತ್ರಸಂಹಿತೆ ನೀಡಿದೆಯೋ, ಶಾಲೆ ಏನು ಸಮವಸ್ತ್ರ ನಿಯಮ ನೀಡುತ್ತದೋ ಅದನ್ನು ಎಲ್ಲ ವಿದ್ಯಾರ್ಥಿಗಳು ಪಾಲನೆ ಮಾಡಬೇಕು ಎಂದು ಹೈಕೋರ್ಟ್ ಮಾರ್ಚ್ನಲ್ಲಿ ತೀರ್ಪು ನೀಡಿತ್ತು.
ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್, ನ್ಯಾ.ಎಸ್ ಕೃಷ್ಣ ದೀಕ್ಷಿತ್ ಅವರಿದ್ದ ತ್ರಿಸದಸ್ಯ ಪೀಠ ಶಾಲಾ, ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿತ್ತು. ಯಾವುದೇ ಶಾಲಾ ಕಾಲೇಜುಗಳು ಹಿಜಾಬ್ ಧರಿಸಲು ಅವಕಾಶ ನೀಡಿಲ್ಲ ಎಂದರೆ ಅದು ಹಿಜಾಬ್ ಕುರಿತು, ಧಾರ್ಮಿಕ ಹಕ್ಕಿನ ಕುರಿತು ಉಲ್ಲಂಘನೆ ಮಾಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ತಿಳಿಸಿತ್ತು.
ಇದನ್ನೂ ಓದಿ:ಹಿಜಾಬ್ಗೆ ಅವಕಾಶ ಕೋರಿದ್ದ ಅರ್ಜಿ ಹೋಳಿ ಹಬ್ಬದ ನಂತರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ