ಕರ್ನಾಟಕ

karnataka

ETV Bharat / bharat

ಕೃಷಿ ಭೂಮಿಗೆ ನೀರುಣಿಸುವ ಸಂಕಲ್ಪ.. 22 ಅಡಿ ಬಾವಿ ಅಗೆದ 74ರ ವಯೋವೃದ್ಧ: ಕ್ರಿಕೆಟಿಗನ ಟ್ವೀಟ್​ನಿಂದ ಸಿಕ್ತು ನೆರವು - ಬುಂದೇಲ್‌ಖಂಡ್ ಪ್ರದೇಶ

22 ಅಡಿ ಅಳದ ಬಾವಿಯನ್ನು ತೋಡಿದ 74 ವರ್ಷದ ಸೀತಾರಾಮ್ ರಜಪೂತ್ ಬಗ್ಗೆ ವಿವಿಎಸ್ ಲಕ್ಷ್ಮಣ್ ಮಾಡಿರುವ ಟ್ವೀಟ್​ ಎಲ್ಲೆಡೆ ವೈರಲ್​ ಆಗಿದೆ. ಇದರಿಂದ ಅಧಿಕಾರಿಗಳು ಎಚ್ಚೆತ್ತ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿ, ಸರ್ಕಾರದ ನೆರವಿಗೆ ಕಲ್ಪಿಸುವ ವ್ಯವಸ್ಥೆ ಮಾಡಿದ್ದಾರೆ.

bundelkhand-farmers-success-story-of-digging-well-gets-further-boost-after-cricketer-vvs-laxmans-tweet
ಕೃಷಿ ಭೂಮಿಗೆ ನೀರುಣಿಸುವ ಸಂಕಲ್ಪ.. 22 ಅಡಿ ಬಾವಿ ಅಗೆದ 74ರ ವಯೋವೃದ್ಧ

By

Published : Feb 14, 2023, 9:49 PM IST

ಸಾಗರ್ (ಮಧ್ಯಪ್ರದೇಶ):ಪ್ರಸ್ತುತ ಜೀವ ಶೈಲಿಯಿಂದ ಯುವಕರು, ಮಧ್ಯ ವಯಸ್ಕರು ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುವಂತೆ ಆಗಿದೆ. ಆದರೆ, ಮಧ್ಯಪ್ರದೇಶದ 74 ವರ್ಷದ ವಯೋವೃದ್ಧರೊಬ್ಬರು 22 ಅಡಿ ಅಳದ ಬಾವಿಯನ್ನು ತೋಡಿ ಎಲ್ಲರನ್ನೂ ಬೆರಗಾಗುವಂತೆ ಮಾಡಿದ್ದಾರೆ. ಈ ವೃದ್ಧ ಸಾಧಕನ ಬಗ್ಗೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್​ ಬೆಳಕು ಚೆಲ್ಲಿದ್ದಾರೆ ಎಂಬುವುದೇ ಮತ್ತೊಂದು ವಿಶೇಷ.

ಹೌದು, ಬುಂದೇಲ್‌ಖಂಡ್ ಪ್ರದೇಶದ ಹದುವಾ ಗ್ರಾಮದ 74 ವರ್ಷದ ಸೀತಾರಾಮ್ ರಜಪೂತ್ ಎಂಬುವವರೇ ಬಾವಿ ತೋಡಿದ ಸಾಧಕರಾಗಿದ್ದಾರೆ. ಸರ್ಕಾರದ ನೆರವು ಅಥವಾ ಸಹಾಯವಿಲ್ಲದೆಯೇ 18 ತಿಂಗಳ ಕಾಲ ಶ್ರಮಿಸಿ ಬಾವಿಯನ್ನು ತೋಡಿ ನೀರು ಚಿಮ್ಮಿಸಿದ್ದಾರೆ. ಅದ್ಭುತ ಸಾಧಕ ಮತ್ತು ಆತನ ಸಾಧನೆ ಬಗ್ಗೆ ವಿವಿಎಸ್ ಲಕ್ಷ್ಮಣ್ ತಮ್ಮ ಟ್ವಿಟರ್​ ಖಾತೆಯಲ್ಲಿ ಫೆಬ್ರವರಿ 7ರಂದು ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದ್ದರು.

ಸ್ಪೂರ್ತಿದಾಯಕ ಎಂದ ಲಕ್ಷ್ಮಣ್: ಮಧ್ಯಪ್ರದೇಶದ ಛತ್ತರ್‌ಪುರದ ಹದುವಾ ಗ್ರಾಮದ 74 ವರ್ಷದ ಸೀತಾರಾಮ್ ರಜಪೂತ್ ಅವರು ಯಾವುದೇ ಬೆಂಬಲ ಪಡೆಯದೇ ತಮ್ಮ ಗ್ರಾಮದಲ್ಲಿ ನೀರಿನ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಏಕಾಂಗಿಯಾಗಿ ಬಾವಿಯನ್ನು ತೋಡಿದ್ದಾರೆ. ಇದೊಂದು ಸ್ಪೂರ್ತಿದಾಯಕವಾಗಿದೆ. ಸೀತಾರಾಮ್ ರಜಪೂತ್ ಮತ್ತು ಇವರಂತಹ ನಂಬಲಾಗದ ನಿಸ್ವಾರ್ಥ ಜನರಿಗೆ ಅಧಿಕಾರಿಗಳು ಸಹಾಯ ಮಾಡಲಿ ಎಂದು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದರು. ಲಕ್ಷ್ಮಣ್ ಮಾಡಿದ ಈ ಟ್ವೀಟ್​ ನೆಟ್ಟಿಗರ ಗಮನ ಸೆಳೆದಿದ್ದು, ರಾತ್ರೋರಾತ್ರಿ ವಯೋವೃದ್ಧ ಸೀತಾರಾಮ್ ಹಲವರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಎಚ್ಚೆತ್ತ ಜಿಲ್ಲಾಡಳಿತದ ಅಧಿಕಾರಿಗಳು: ಸೀತಾರಾಮ್ ರಜಪೂತ್ ಬಗ್ಗೆ ವಿವಿಎಸ್ ಲಕ್ಷ್ಮಣ್ ಮಾಡಿದ್ದ ಟ್ವೀಟ್​ ಎಲ್ಲೆಡೆ ವೈರಲ್​ ಆಗಿತ್ತು. ನಂತರ ಇದು ಜಿಲ್ಲಾಡಳಿತದ ಅಧಿಕಾರಿಗಳ ಗಮನಕ್ಕೂ ಬಂದಿದೆ. ಅಂತೆಯೇ, ಎಚ್ಚೆತ್ತುಕೊಂಡು ಅಧಿಕಾರಿಗಳು ಸಾಧಕ ಸೀತಾರಾಮ್​ ಅವರಿಗೆ ಸರ್ಕಾರಿ ಸಲವತ್ತುಗಳನ್ನು ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ಲಕ್ಷ್ಮಣ್ ಅವರಿಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತಾಗಿ ಫೆಬ್ರವರಿ 10ರಂದು ಮತ್ತೊಂದು ಟ್ವೀಟ್​ ಮಾಡಿರುವ ಕ್ರಿಕೆಟಿಗ, ಸೀತಾರಾಮ್ ಅವರ ಹೆಸರನ್ನು ಎನ್‌ಎಫ್‌ಎಸ್‌ಎ ಯೋಜನೆಯಡಿ ನೋಂದಣಿ ಮಾಡಲಾಗಿದೆ. ಜೊತೆಗೆ ವೃದ್ಧಾಪ್ಯ ಪಿಂಚಣಿ, ಮತ್ತು ಜಮೀನಿಗೆ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಸ್ಪ್ರಿಂಕ್ಲರ್‌ಗಾಗಿ ಪಿಎಂ ಕೃಷಿ ಸಿಂಚಾಯಿ ಯೋಜನೆಯಡಿ ಕೂಡ ಹೆಸರು ನೋಂದಾಯಿಸಲಾಗಿದೆ. ಈ ಬಗ್ಗೆ ಚತ್ತರ್‌ಪುರದ ಜಿಲ್ಲಾ ಅಧಿಕಾರಿಗಳಿಂದ ಮಾಹಿತಿ ಸ್ವೀಕರಿಸಲಾಗಿದೆ ಎಂದು ಹೇಳಿದ್ದಾರೆ.

ಸೀತಾರಾಮ್ ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ಇಷ್ಟೇ ಅಲ್ಲ, ಜಿಲ್ಲೆಯ ನೀರಾವರಿ ಇಲಾಖೆ ಮತ್ತು ಕಂದಾಯ ವೃತ್ತದ ಅಧಿಕಾರಿಗಳು ಕೂಡ ಸೀತಾರಾಮ್ ಅವರು ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಸರ್ಕಾರಿ ಯೋಜನೆಗಳನ್ನು ತಲುಪಿಸುವುದೊಂದಿಗೆ ಅವರ ಅವಶ್ಯಕತೆಗಳ ಬಗ್ಗೆಯೂ ಅಧಿಕಾರಿಗಳು ವಿಚಾರಿಸುತ್ತಿದ್ದಾರೆ. ಅಲ್ಲದೇ, ಬಿಪಿಎಲ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಿದ್ದಾರೆ. ಹೆಚ್ಚಿನ ಇಳುವರಿ ನೀಡುವ ವಿವಿಧ ಬೀಜಗಳು ಮತ್ತು ಗೊಬ್ಬರ ತೆಗೆದುಕೊಳ್ಳಲು ಹಣಕಾಸಿನ ನೆರವು ಸಹ ಸಾಧಕ ಸೀತಾರಾಮ್​ ಅವರಿಗೆ ಹರಿದುಬರಲು ಪ್ರಾರಂಭಿಸಿದೆ.

ಕೃಷಿ ಭೂಮಿಗೆ ನೀರುಣಿಸುವ ಸಂಕಲ್ಪ: ತಮ್ಮ ಸಾಧನೆಯ ಬಗ್ಗೆ ಮಾತನಾಡಿದ ಸೀತಾರಾಮ್​, ಯಾರ ಸಹಾಯವಿಲ್ಲದೆ ಸ್ವಂತವಾಗಿ ಬಾವಿ ತೋಡಿದ್ದೇನೆ. ಇದರ ಮಧ್ಯೆದಲ್ಲಿ ಕೇವಲ ಇಬ್ಬರು ಕೂಲಿ ಕಾರ್ಮಿಕರ ಸಹಾಯ ಮಾಡಿದ್ದಾರೆ. ಇತ್ತೀಚೆಗೆ ಕಂದಾಯ ಇಲಾಖೆಯ ಸರ್ಕಲ್ ಆಫೀಸರ್ ನನ್ನ ಕೆಲಸವನ್ನು ನೋಡಲು ಗ್ರಾಮಕ್ಕೆ ಭೇಟಿ ನೀಡಿದ್ದರು. ಬಾವಿ ಅಳತೆಯನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಕಾಂಕ್ರೀಟಿಕರಣ​ ಮಾಡಲು ಅಂದಾಜು ವೆಚ್ಚವನ್ನು ಸಹ ಸಿದ್ಧಪಡಿಸಲಾಗಿದೆ ಎಂಬುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿಸಿದರು.

ಬಾವಿ ತೋಡಲು ಪ್ರಾರಂಭಿಸಿದಾಗ ತಮ್ಮ ಅನುಭವವನ್ನು ಸ್ಮರಿಸಿದ ಅವರು, ನಾನು ಬಾವಿ ಅಗೆಯಲು ಆರಂಭಿಸಿದಾಗ ನಮ್ಮವರೇ ನನಗೆ ಸಹಕಾರ ನೀಡಿಲ್ಲ. ನನ್ನ ಹಿರಿಯ ಸಹೋದರ ಮತ್ತು ಇತರ ಗ್ರಾಮಸ್ಥರು ಯಾವಾಗಲೂ ನನ್ನ ಪ್ರಯತ್ನವನ್ನು ವಿರೋಧಿಸುತ್ತಿದ್ದರು. ಕೆಲವು ಸಲ ನನ್ನ ಸಂಬಂಧಿಕರು ಗುದ್ದಲಿ ಮತ್ತು ಇತರ ಅಗೆಯುವ ಸಲಕರಣೆಗಳನ್ನು ತೆಗೆದುಕೊಂಡು ಹೋಗಿದ್ದರು. ಆದರೆ, ನಾನು ನಾನು ಪ್ರಯತ್ನವನ್ನು ನಿಲ್ಲಿಸಲೇ ಇಲ್ಲ. ಕೃಷಿ ಭೂಮಿಗೆ ನೀರುಣಿಸುವ ನನ್ನ ಸಂಕಲ್ಪ ಅಚಲವಾಗಿತ್ತು. 22 ಅಡಿ ಅಗೆದ ನಂತರ ನೀರಿನ ಸೆಲೆ ಕಂಡು ನಾನು ಮೂಕವಿಸ್ಮಿತನಾಗಿದೆ ಎಂದು ಖುಷಿ ಹಂಚಿಕೊಂಡರು.

ಇದನ್ನೂ ಓದಿ:ಪ್ರಿಯತಮೆಯ ಭೇಟಿಗೆ ಹೋಗಿ ಪಾಕ್​ ಪ್ರವೇಶಿಸಿದ್ದ ರಾಜಸ್ಥಾನಿ ಯುವಕ: ಪ್ರೇಮಿಗಳ ದಿನವೇ ತಾಯ್ನಾಡಿಗೆ ವಾಪಸ್​!

ABOUT THE AUTHOR

...view details