ಜಲೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ನಾಲ್ಕು ದಿನಗಳ ಹಿಂದೆಯಷ್ಟೇ ಉದ್ಘಾಟಿಸಿದ ಬುಂದೇಲ್‌ಖಂಡ್ ಹೆದ್ದಾರಿ ರಸ್ತೆ ಮಳೆಗೆ ಹಾನಿಯಾಗಿದೆ. ಅಲ್ಲದೇ, ಡಾಂಬರು ಕಿತ್ತುಕೊಂಡು ಹೋಗಿ ರಸ್ತೆ ಅಪಘಾತಗಳು ಸಹ ಸಂಭವಿಸಿವೆ. ಹೀಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ.
ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಕನಸಿನ ಯೋಜನೆಯಾಗಿದೆ. 14,800 ಕೋಟಿ ರೂ. ವೆಚ್ಚದಲ್ಲಿ ಚಿತ್ರಕೂಟದಿಂದ ಇಟಾವಾವರೆಗೆ 296 ಕಿ.ಮೀ. ಉದ್ದದ ಹೆದ್ದಾರಿಯನ್ನು ಜುಲೈ 16ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಇದಾದ ನಾಲ್ಕೇ ದಿನದಲ್ಲಿ ಸುರಿದ ಮೊದಲ ಮಳೆಗೆ ಕೊಚ್ಚಿ ಹೋಗಿದೆ.
ಬುಧವಾರ ಸುರಿದ ಮಳೆಯಿಂದಾಗಿ ಎಕ್ಸ್‌ಪ್ರೆಸ್ ವೇಯ ಹಲವೆಡೆ 2ರಿಂದ 3 ಅಡಿ ಆಳದ ಗುಂಡಿಗಳು ಬಿದ್ದಿವೆ. ಹದಗೆಟ್ಟ ರಸ್ತೆಯಿಂದಾಗಿ ಬುಧವಾರ ರಾತ್ರಿಯೇ ಅಪಘಾತಗಳು ಸಂಭವಿಸಿದ್ದು, ಒಂದು ಬೈಕ್, ನಾಲ್ಕು ವಾಹನಗಳಲ್ಲಿ ಸಂಚರಿಸುತ್ತಿದ್ದ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಮೂಲಕ ಹೆದ್ದಾರಿಯ ಗುಣಮಟ್ಟ ಬಯಲಿಗೆ ಬಂದಿದೆ.
ಸರ್ಕಾರದ ವಿರುದ್ಧ ಟೀಕಾಪ್ರಹಾರ: ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್ ವೇ ಹಾಳಾದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಹಾನಿಗೊಳಗಾದ ಎಕ್ಸ್‌ಪ್ರೆಸ್‌ವೇಯ ವಿಡಿಯೋ ಶೇರ್ ಮಾಡಿರುವ ಅಖಿಲೇಶ್ ಯಾದವ್, 'ಇದು ಬಿಜೆಪಿಯ ಅರೆಬೆಂದ ಅಭಿವೃದ್ಧಿಯ ಗುಣಮಟ್ಟದ ಮಾದರಿಯಾಗಿದೆ' ಎಂದು ವಾಗ್ದಾಳಿ ಮಾಡಿದ್ದಾರೆ.